ಮಂಗಳೂರು: ತುಳುವಿನ 8 ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಲೀಲಾವತಿ ಅವರು, ತುಳು ಸಿನಿಮಾಗಳ ನಿರ್ಮಾಣಕ್ಕೂ ಸಹಾಯ ಹಸ್ತ ಚಾಚಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರಾಗಿರುವ ಅವರು, ಕಂಕನಾಡಿಯ ಸೈಂಟ್ ಜೋಸೆಫ್ ಎಲಿಮೆಂಟರಿ ಸ್ಕೂಲಿನಲ್ಲಿ 2ನೇ ತರಗತಿ ಕಲಿತವರು. ಆಗ ಲೀಲಾ ಕಿರಣ್ ಎಂಬ ಹೆಸರಿನಿಂದ ಕರೆಸಿಕೊಂಡಿದ್ದ ಅವರು, ಬಳಿಕ ಲೀಲಾವತಿಯಾಗಿ ಕರುನಾಡಿನ ಕಣ್ಮಣಿಯಾಗಿ ಬೆಳೆದರು.
ತುಳು ಭಾಷೆಯ 2ನೇ ಸಿನಿಮಾ 1971ರಲ್ಲಿ ತೆರೆಕಂಡ `ದಾರೆದ ಬುಡೆದಿ’, 1972ರಲ್ಲಿ ತೆರೆಕಂಡ `ಪಗೆತ ಪುಗೆ’ ಹಾಗೂ `ಬಿಸತ್ತಿ ಬಾಬು’, 1973ರಲ್ಲಿ ತೆರೆಕಂಡ `ಯಾನ್ ಸನ್ಯಾಸಿ ಆಪೆ’, 1976ರಲ್ಲಿ ತೆರೆಕಂಡ `ಸಾವಿರಡೊರ್ತಿ ಸಾವಿತ್ರಿ’, 1981ರ `ಭಾಗ್ಯವಂತೆದಿ’, 1983ರ `ಬದ್ಕೆರೆ ಬುಡ್ಲೆ’, 1984ರ `ದಾರೆದ ಸೀರೆ’ ಹೀಗೆ ತುಳುವಿನ 8 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಮನೆಯಲ್ಲಿಯೂ ಅವರು ತುಳು ಭಾಷೆಯಲ್ಲಿ ಮಾತನಾಡುತ್ತಿದ್ದರು. ಈ ಮೂಲಕ ತುಳು ಭಾಷಾ ಪ್ರೇಮ ಮೆರೆದಿದ್ದರು ಎಂದು ಅವರ ಆಪ್ತರು ನೆನಪು ಮಾಡಿಕೊಳ್ಳುತ್ತಾರೆ.