ಪುತ್ತೂರು: ‘ಭತ್ತ ಬೆಳೆಯೋಣ ಗದ್ದೆಗಿಳಿಯೋಣ’ ಅಭಿಯಾನದ ಮೂಲಕ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಈ ಬಾರಿ 50 ಸಾವಿರ ರೂ. ಆದಾಯ ಗಳಿಸಿದ್ದು, ಈ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೃಷಿಕರ ಬದುಕಿಗೆ ಮಾದರಿಯಾಗಿದೆ.
ಮೂರು ವರ್ಷಗಳ ಹಿಂದೆ ಧಾರ್ಮಿಕ ಕ್ಷೇತ್ರಗಳಲ್ಲಿ ‘ಭತ್ತ ಬೆಳೆಯೋಣ ಗದ್ದೆಗಿಳಿಯೋಣ’ ಅಭಿಯಾನವನ್ನು ಆರಂಭಗೊಳಿಸಲಾಗಿತ್ತು. ಅದರಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಗದ್ದೆಯಲ್ಲಿ ಭತ್ತವನ್ನು ಬೆಳೆದು ಬೇಸಾಯದಿಂದಲೂ ಲಾಭ ಗಳಿಸಬಹುದು ಅನ್ನೋದನ್ನು ತೋರಿಸಿಕೊಟ್ಟಿದೆ. ಅದರಲ್ಲೂ ಈ ಬಾರಿ ಉತ್ತಮ ಫಸಲು ಬಂದಿದ್ದು, ಹೆಚ್ಚಿನ ಲಾಭವೂ ತಂದುಕೊಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ “ಭತ್ತ ಬೆಳೆಯೋಣ, ಗದ್ದೆಗಿಳಿಯೋಣ” ಅಭಿಯಾನವು ಭಾರೀ ಯಶಸ್ಸು ಕಂಡಿದೆ. ಈ ಬಾರಿ ಸುಮಾರು 18 ಕ್ವಿಂಟಾಲ್ ಭತ್ತವನ್ನು ಪಡೆಯಲಾಗಿದೆ. ಸುಮಾರು 1.75 ಎಕರೆ ಗದ್ದೆಯಲ್ಲಿ ಎಂಒ 4 ಹಾಗೂ ಜ್ಯೋತಿ ತಳಿಯ ಭತ್ತದ ಬೀಜಗಳನ್ನು ಈ ಬಾರಿ ಬಿತ್ತಲಾಗಿತ್ತು. ಮಣ್ಣು ತುಂಬಿಸಿ ಸಾವಯವ ಮಾದರಿಯಲ್ಲಿ ಮಾಡಲಾದ ಭತ್ತ ಕೃಷಿ ಉತ್ತಮ ಫಸಲನ್ನು ನೀಡಿದೆ.
ಕೆಲವು ದೇವಸ್ಥಾನಗಳಲ್ಲಿ ವಿವಿಧ ಕಾರಣಗಳಿಂದ ಈ ಅಭಿಯಾನ ಸ್ಥಗಿತಗೊಂಡರೆ ಮಹಾಲಿಂಗೇಶ್ವರ ದೇವಾಲಯದ ಗದ್ದೆಯಲ್ಲಿ ಬೇಸಾಯ ಯಥಾಸ್ಥಿತಿಯಲ್ಲಿ ಮುಂದುವರೆದಿತ್ತು. ದೇವಸ್ಥಾನದ ಗದ್ದೆಯಲ್ಲಿ ಈ ಸಲ ಬೆಳೆದಂತಹ ಬೇಸಾಯದ ವೆಚ್ಚವನ್ನು ದೇವಸ್ಥಾನದ ಆಡಳಿತ ಮಂಡಳಿ ಕ್ರಮವಾಗಿ ಪಟ್ಟಿ ಮಾಡಿದೆ. ಹೀಗೆ ಪಟ್ಟಿ ಮಾಡಲಾದ ಖರ್ಚು ವೆಚ್ಚಗಳನ್ನು ನೋಡಿದರೆ, 18 ಕ್ವಿಂಟಾಲ್ ಭತ್ತದ ಜೊತೆಗೆ ಸುಮಾರು 40 ಸಾವಿರ ರೂ. ಮೌಲ್ಯದ ಭತ್ತದ ಹುಲ್ಲು ದೊರೆತಿದೆ. ಒಟ್ಟು ಸುಮಾರು 90 ಸಾವಿರ ರೂ. ಸಿಕ್ಕಂತಾಗಿದೆ. ಖರ್ಚುಗಳನ್ನು ಬಿಟ್ಟು ನೋಡಿದರೆ ಸುಮಾರು 50 ಸಾವಿರ ರೂಪಾಯಿಯಷ್ಟು ಆದಾಯವನ್ನು ತಂದುಕೊಟ್ಟಿದೆ.