ತಾಳಿ ಕಟ್ಟುವ ಶುಭವೇಳೆ, ಕೈಯಲ್ಲಿರಲು ಹೂಮಾಲೆ, ಒಲ್ಲೆ ಅಂದಳು ಬಾಲೆ…!!

ತಾಳಿ ಕಟ್ಟುವ ವೇಳೆಯಲ್ಲಿ ವಧು ಮದುವೆಯನ್ನು ತಡೆ ಹಿಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ನಡೆದಿದೆ.

ಚಳ್ಳಕೆರೆ ತಾಲೂಕಿನ ತಿಪ್ಪರಡ್ಟಿಹಳ್ಳಿಯ ಯಮುನಾ ಜಿ.ಎಂ ಜತೆಗೆ ಚಿಕ್ಕಬ್ಯಾಲದಕೆರೆಯ ಸಂತೋಷನೊಟ್ಟಿಗೆ ಮದುವೆ ನಿಶ್ಚಯವಾಗಿತ್ತು. ಚಿಕ್ಕಬ್ಯಾಲದಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಡಿ. 6-7ರಂದು ವಿವಾಹ ನಡೆಯಬೇಕಿತ್ತು. ಡಿ.6ರಂದು ಆರತಕ್ಷತೆಯು ಚೆನ್ನಾಗಿಯೇ ನಡೆದಿತ್ತು. ಮದುವೆ ಪೂರ್ವವಾಗಿ ನಡೆಯಬೇಕಾದ ಶಾಸ್ತ್ರ-ಸಂಪ್ರದಾಯಗಳೆಲ್ಲವೂ ಜರುಗಿತ್ತು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ವಧು ಮನಸ್ಸನ್ನು ಬದಲಾಯಿಸಿದ್ದಳು.

ಮುಹೂರ್ತದ ಸಮಯಕ್ಕೆ ವಧು ಮತ್ತು ವರನನ್ನು ಮಂಟಪದಲ್ಲಿ ಕೂರಿಸಲಾಗಿತ್ತು. ಕಲ್ಯಾಣ ಮಂಟಪದಲ್ಲಿ ಮಾಡಬೇಕಾದ ಶಾಸ್ತ್ರಗಳು ಆಗಷ್ಟೇ ಪ್ರಾರಂಭವಾಗಿದ್ದವು. ಪ್ರತಿಯೊಂದು ಆಚರಣೆಯನ್ನೂ ತುಂಬ ಸಂಪ್ರದಾಯ ಬದ್ಧವಾಗಿಯೇ ಮಾಡಲಾಗುತ್ತಿತ್ತು. ಹಸೆಮಣೆ ಏರಬೇಕಿದ್ದ ವರನಿಗೆ ಪುರೋಹಿತರು ತಾಳಿಯನ್ನು ಕೊಟ್ಟು ಮಂತ್ರಗಳನ್ನು ಹೇಳುತ್ತಿದ್ದರು, ಜತೆಗೆ ಗಟ್ಟಿಮೇಳವು ಶುರುವಾಗಿತ್ತು.































 
 

ತಾಳಿ ಕಟ್ಟುವ ಶುಭ ವೇಳೆಗೆ ಕುಟುಂಬಸ್ಥರು, ನಂಟರಿಷ್ಟರು, ಬಂಧು-ಬಳಗದವರು, ಸ್ನೇಹಿತರು ಎಲ್ಲರೂ ಮದುವೆಗೆ ಸೇರಿದ್ದರು. ವರ ಸಂತೋಷ್‌ ತಾಳಿ ಕಟ್ಟಲು ಹತ್ತಿರ ಬಂದಾಗ ವಧು ಯಮುನಾ ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾಳೆ. ನಾನಿನ್ನೂ ಓದಬೇಕು ಎನ್ನುವ ಕಾರಣ ನೀಡಿ ಮದುವೆಯನ್ನು ನಿಲ್ಲಿಸಿದ್ದಾಳೆ. ಈ ಮಧ್ಯೆ ಆಕೆಯ ಮನೆಯವರು, ಹುಡುಗನ ಮನೆಯವರು ಏನೆಲ್ಲ ಹೇಳಿ ಸಮಾಧಾನ ಮಾಡಲು ಯತ್ನಿಸಿದರೂ ವಧು ಮದುವೆಗೆ ಒಪ್ಪದ ಕಾರಣಕ್ಕೆ ಮದುವೆ ಮುರಿದುಬಿದ್ದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top