ಬೆಂಗಳೂರು: ಹಾಲಿನ ದರ ಮತ್ತೊಮ್ಮೆ ಏರಿಕೆ ಮಾಡುವ ಕುರಿತು ಕೆಎಂಎಫ್ ಮುಂದಾಗಿದೆ ಎಂದು ತಿಳಿದುಬಂದಿದೆ.
ಒಕ್ಕೂಟಗಳು ನಷ್ಟದಲ್ಲಿರುವ ಕಾರಣ ನೀಡಿ ಹಾಲಿನ ದರ ಪರಿಷ್ಕರಣೆ ಮಾಡಲು ಹೊರಟಿದ್ದು. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಮುಂದಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಗೆ ಮನವಿ ಬಂದಿದೆ. ಹೀಗಾಗಿ ಅಧಿವೇಶನದಿಂದ ಸಿಎಂ ಬಂದ ಬಳಿಕ ಸಿದ್ದರಾಮಯ್ಯರ ಭೇಟಿ ಮಾಡಿ ನಂದಿನಿ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಆಡಳಿತ ಮಂಡಳಿ ತೀರ್ಮಾನಿಸಿದ್ದು, ಪ್ರತಿ ಲೀಟರ್ ಗೆ 5 ರೂ. ದರ ಹೆಚ್ಚಿಸುವಂತೆ ಮನವಿ ಮಾಡಲು ನಿರ್ಧರಿಸಿದೆ. ಕಳೆದ ಆಗಸ್ಟ್ 1ರಿಂದ ನಂದಿನಿ ಪ್ರತೀ ಲೀಟರ್ ಗೆ 3 ರೂ. ಹೆಚ್ಚಳ ಮಾಡಿತ್ತು. 5 ರೂ. ಹೆಚ್ಚಳ ಮಾಡಲು ಮನವಿ ಮಾಡಿದ್ದಕ್ಕೆ ಕೇವಲ ಮೂರು ರೂ. ಹೆಚ್ಚಳ ಮಾಡಿತ್ತು. ಹೀಗಾಗಿ ಲೀಟರ್ ಗೆ 3 ರೂ. ಹೆಚ್ಚುವರಿ ಹಣ ರೈತರಿಗೆ ಕೆಎಂಎಫ್ ನೀಡಿತ್ತು.