ಬೆಂಗಳೂರು: ಗ್ಯಾರೆಂಟಿ ಭಾಗ್ಯಗಳನ್ನು ನೀಡಿರುವ ರಾಜ್ಯ ಸರ್ಕಾರ ಪ್ರಚಾರಕ್ಕೂ ದೊಡ್ಡ ಮೊತ್ತವನ್ನು ವಿನಿಯೋಗಿಸಿದೆ ಎನ್ನುವ ಅಂಶ ಇದೀಗ ಬಯಲಾಗಿದೆ.
ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಈ ಬಗ್ಗೆ ಉಲ್ಲೇಖಿಸಿದ್ದಾರೆ. ಅದರಲ್ಲಿ ಬಾಕಿ ಉಳಿದಿರುವ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಅಧಿಕಾರಕ್ಕೇರಿ ಕೇವಲ ನಾಲ್ಕು ತಿಂಗಳಲ್ಲಿ ಅದೆಷ್ಟು ಮೊತ್ತದ ಜಾಹೀರಾತನ್ನು ನೀಡಿರಬಹುದು ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಪತ್ರದಲ್ಲಿ ತಿಳಿಸಿರುವಂತೆ –“ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು, ಸುದ್ದಿವಾಹಿನಿಗಳಿಗೆ ನೀಡಲಾಗಿರುವ ಜಾಹೀರಾತು ಬಾಬ್ತು ಬಾಕಿ 140 ಕೋಟಿ ರೂ. ಆಗಿದೆ. ಇಷ್ಟು ಬೃಹತ್ ಮೊತ್ತದ ಬಾಕಿಯಿಂದಾಗಿ ಮಾಧ್ಯಮ ಸಂಸ್ಥೆಗಳು ತುಂಬಾ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಂಪಾದಕರು, ಪತ್ರಕರ್ತರ ಸಂಘಟನೆಗಳು ನನ್ನ ಬಳಿ ನಿವೇದಿಸಿಕೊಂಡಿವೆ. ಅಂತೆಯೇ ಆದಷ್ಟು ಜರೂರಾಗಿ ಜಾಹೀರಾತು ಬಾಕಿ ಮೊತ್ತ 140 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿಕೊಟ್ಟು, ಮಾಧ್ಯಮ ಸಂಸ್ಥೆಗಳ ನೆರವಿಗೆ ನಿಲ್ಲುವಂತೆಯೂ ಸಂಘಟನೆಗಳು ಮನವಿ ಮಾಡಿರುತ್ತವೆ. ಆದ್ದರಿಂದ ವಾರ್ತಾ ಇಲಾಖೆಗೆ ಶೀಘ್ರವೇ 140 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಮಾಧ್ಯಮ ಸಂಸ್ಥೆಗಳ ನೆರವಿಗೆ ನಿಲ್ಲಬೇಕೆಂದು ಕೋರಿದೆ” ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ.