ಅತ್ಯಾಚಾರ ನಡೆಸಿದ ಆರೋಪಿಯೊಬ್ಬ ಜಾಮೀನಿನ ಮೇಲೆ ಜೈಲಿಂದ ಹೊರಬಂದು ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆ ಮಧ್ಯದೆಹಲಿಯಲ್ಲಿ ನಡೆದಿದೆ. ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಅತ್ಯಾಚಾರ ಆರೋಪಿಯನ್ನು ಪ್ರೇಮ್ ಸಿಂಗ್ ಎಂದು ಗುರುತಿಸಲಾಗಿದೆ. ಕುಟುಂಬದವರ ವಿವಾಹದಲ್ಲಿ ಪಾಲ್ಗೊಳ್ಳಲು ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು.
ಗುರುವಾರ ಸಂಜೆ ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಬಳಿಗೆ ತೆರಳಿ ದೂರನ್ನು ಹಿಂಪಡೆಯುವಂತೆ ಕೇಳಿದ್ದಾನೆ. ಅದನ್ನು ನಿರಾಕರಿಸಿದ್ದಕ್ಕೆ ಆತ ಮಹಿಳೆಯ 17 ವರ್ಷದ ಮಗಳ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತಾನೂ ಕುಡಿದಿದ್ದಾನೆ.
ಪ್ರೇಮ್ ಸಿಂಗ್ ಹಾಗೂ ಮಹಿಳೆ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ನೆರೆಹೊರೆಯವರು. ವ್ಯಕ್ತಿ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಾಗ ಪ್ರಕರಣವನ್ನು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಆಕೆ ನಿರಾಕರಿಸಿದಾಗ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.