ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿಯ ರೈಲ್ವೇಸ್ ಕಾಲೋನಿಯಲ್ಲಿ ನಡೆದಿದೆ.
ರೈಲ್ವೇಯಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಣ್ಣಿನ ತಜ್ಞ ಡಾ.ಅರುಣ್ ಕುಮಾರ್ ಅವರನ್ನು ರಾಯ್ ಬರೇಲಿಯಲ್ಲಿರುವ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಮಿರ್ಜಾಪುರದ ನಿವಾಸಿಯಾಗಿರುವ ಡಾ. ಕುಮಾರ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ರಾಯ್ ಬರೇಲಿಯ ರೈಲ್ವೇ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದರು.
ಕಳೆದ ಭಾನುವಾರ ನೆರೆಹೊರೆಯವರಿಗೆ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ ಯಾರ ಕಣ್ಣಿಗೂ ಈ ಕುಟುಂಬ ಸದಸ್ಯರು ಕಾಣಲಿಲ್ಲ. ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು ಹಾಗೂ ವೈದ್ಯರ ಸಹೋದ್ಯೋಗಿಗಳು ಮನೆಯ ಬಳಿ ಬಂದು ಬೆಲ್ ಮಾಡಿದ್ದಾರೆ. ಆದರೆ ಮನೆಯ ಒಳಗಿಂದ ಯಾವುದೇ ಸದ್ದು ಕೇಳಿಸಲಿಲ್ಲ. ಆದರೆ ಮನೆಯ ಒಳಗಿನಿಂದ ಬಾಗಿಲು ಹಾಕಿತ್ತು. ಇದನ್ನು ಕಂಡು ಸಂಶಗೊಂಡ ಸಹೋದ್ಯೋಗಿಗಳು ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಒಳಗೆ ವೈದ್ಯ, ಅವರ ಪತ್ನಿ ಅರ್ಚನಾ, ಮಗಳು ಆದಿವಾ (12) ಮತ್ತು ಮಗ ಆರವ್ (40) ಅವರ ಮೃತದೇಹ ಪತ್ತೆಯಾಗಿದೆ.
ಆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಮೃತದೇಹದ ಬಳಿ ಸುತ್ತಿಗೆ, ರಕ್ತದ ಕಲೆಗಳು ಮತ್ತು ಡ್ರಗ್ ಇಂಜೆಕ್ಷನ್‌ಗಳು ಪತ್ತೆಯಾಗಿದ್ದು, ಪೊಲೀಸರ ಮಾಹಿತಿಯಂತೆ ವೈದ್ಯರು ಮೊದಲು ಮಕ್ಕಳು ಹಾಗೂ ಪತ್ನಿಗೆ ಅಮಲು ಬರುವ ಇಂಜೆಕ್ಷನ್ ನೀಡಿ ಬಳಿಕ ಸುತ್ತಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರಬೇಕು. ಆ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಹೆಚ್ಚಿನ ವಿವರ ಸಿಗಲಿದೆ ಎಂದು ರಾಯ್ ಬರೇಲಿ ಎಸ್ಪಿ ಅಲೋಕ್ ಪ್ರಿಯದರ್ಶಿ ಹೇಳಿದ್ದಾರೆ.
ನೆರೆಹೊರೆಯವರ ಪ್ರಕಾರ ಕೌಟುಂಬಿಕ ಸಮಸ್ಯೆ ಇದ್ದಿರಬಹುದು. ಆದರೆ ರೋಗಿಗಳಿಗೆ ಮತ್ತು ನೆರೆಹೊರೆಯವರೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಕೋಪಗೊಳ್ಳುತ್ತಿದ್ದರು. ಖಿನ್ನತೆಗೆ ಒಳಗಾಗುತ್ತಿದ್ದರು. ಇದೇ ಖಿನ್ನತೆಯಿಂದ ಈ ರೀತಿಯ ಕೃತ್ಯ ಎಸಗಿರಲುಬಹುದು ಎಂದು ಸ್ಥಳೀಯರು ಹೇಳಿದ್ದಾರೆ.