ಪ್ರಮುಖ ಪ್ರತಿ ಪಕ್ಷದ ನಾಯಕರ ಅಲಭ್ಯತೆ ಹಿನ್ನಲೆಯಲ್ಲಿ ನಾಳೆ ಅಂದರೆ ಬುಧವಾರ ನಡೆಯಬೇಕಿದ್ದ INDIA ಮಿತ್ರಕೂಟದ ಸಭೆಯನ್ನು ಮುಂದೂಡಲಾಗಿದೆ.
ಪಂಚರಾಜ್ಯಗಳ ಚುನಾವಣೆ ಹಿನ್ನಲೆ INDIA ಒಕ್ಕೂಟದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದರು. ಹೀಗಾಗಿ ಬುಧವಾರ ದೆಹಲಿಯಲ್ಲಿ INDIA ಮೈತ್ರಿಕೂಟದ ಸಭೆ ಕರೆಯಲಾಗಿತ್ತು.
ಆದರೆ ಮಿಚಾಂಗ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಭಾರಿ ಮಳೆ ಮತ್ತು ಮಳೆ ಸಂಬಂಧಿತ ಅವಘಡಗಳು ಸಂಭವಿಸಿರುವುದರಿಂದ ಮತ್ತು ರಾಜಧಾನಿ ಚೆನ್ನೈ ವಿಮಾನ ನಿಲ್ದಾಣವನ್ನು ಮುಚ್ಚಿದ್ದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ದೆಹಲಿಗೆ ಭೇಟಿ ನೀಡಲು ಮತ್ತು ಸಭೆಗೆ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇತ್ತ ಬಿಹಾರದ ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಅಸ್ವಸ್ಥರಾಗಿದ್ದು ಅವರೂ ಕೂಡ ಸಭೆಗೆ ಗೈರಾಗಲಿದ್ದಾರೆ ಎಂದು ಹೇಳಲಾಗಿತ್ತು. ಅಂತೆಯೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಸಭೆಗೆ ಗೈರಾಗುವ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರು.
ಇದಲ್ಲದೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡಾ ಸಭೆಯಲ್ಲಿ ಭಾಗಿಯಾಗದಿರುವ ಕುರಿತು ಖಚಿತ ಪಡಿಸಿದ್ದರು. ಆಮ್ ಆದ್ಮಿ ಪಕ್ಷವು ಸಭೆಯಲ್ಲಿ ಭಾಗಿಯಾಗುವ ಬಗ್ಗೆ ಯಾವುದೇ ದೃಢೀಕರಣ ನೀಡಿರಲಿಲ್ಲ. ಹೀಗಾಗಿ ಅಂತಿಮವಾಗಿ ಕಾಂಗ್ರೆಸ್ ಪಕ್ಷ ನಾಳೆ ನಡೆಯಬೇಕಿದ್ದ INDIA ಮೈತ್ರಿಕೂಟದ ಸಭೆಯನ್ನು ಮುಂದೂಡಿದೆ.
ಒಕ್ಕೂಟದ ಪ್ರಮುಖ ನಾಯಕರ ಅಲಭ್ಯತೆ ಹಿನ್ನಲೆ ಸಭೆಯನ್ನು ಮುಂದೂಡಲು ನಿರ್ಧರಿಸಿದ್ದು ಮುಂದಿನ ಎರಡು ವಾರಗಳಲ್ಲಿ ಮತ್ತೆ ಸಭೆಗೆ ದಿನಾಂಕ ನಿಗದಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಸಭೆ ರದ್ದಾದ ಹಿನ್ನಲೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಶಿವಸೇನೆ ಪಕ್ಷದ ಮೂಲಗಳು ತಿಳಿಸಿವೆ. ಈ ಹಿಂದೆ ಅಂದರೆ INDIA ಒಕ್ಕೂಟದ ಕೊನೆಯ ಸಭೆಯನ್ನು ಮುಂಬೈನಲ್ಲಿ ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಆಯೋಜಿಸಿದ್ದರು. ಈ ಸಭೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಐದು ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು.