ಲವ್ ಜಿಹಾದ್ ಗೆ ಒಳಗಾಗುವ ಮಹಿಳೆಯರು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾಗಿದೆ : ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮಾವೇಶದಲ್ಲಿ ಮಾಳವಿಕ ಅವಿನಾಶ್

ಪುತ್ತೂರು: ಪುತ್ತೂರು ಜಿಲ್ಲಾ ಮಹಿಳಾ ಸಮನ್ವಯ ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿ ಜಂಟಿ ಆಶ್ರಯದಲ್ಲಿ ಮಹಿಳೆ ಇಂದು ಮತ್ತು ನಾಳೆ ಕುರಿತು ‘ನಾರಿ ಶಕ್ತಿ ಸಂಗಮ’ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ನಡೆಯಿತು.

2025ನೇ ಇಸವಿಗೆ ಆರ್‌ಎಸ್‌ಎಸ್ ಗೆ 100 ವರ್ಷ ತುಂಬಲಿದ್ದು, ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ವೈದ್ಯರು, ವಕೀಲರು, ಅಧ್ಯಾಪಕಿಯರು, ಸ್ವಯಂ ಸೇವಾ ಸಂಸ್ಥೆಯವರು, ಮಹಿಳಾ ಸಂಘಗಳು, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು, ವಿದ್ಯಾರ್ಥಿನಿಯರು, ಹೋರಾಟಗಾರ್ತಿಯರು ಹೀಗೆ ಸಮಾಜದ ಬೇರೆ ಆಯಾಮಗಳ ಸುಮಾರು 11 ಕ್ಷೇತ್ರದ ಸುಮಾರು ೧೫೦೦ ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ನೇಕಾರರಿಂದ ನೇಯ್ದ ಸೀರೆಗಳ ಮಳಿಗೆ, ಗೋವು ಉತ್ಪನ್ನಗಳು, ಕರಕುಶಲ ಉತ್ಪನ್ನಗಳ ಮಳಿಗೆಗಳು ಗಮನ ಸೆಳೆದವು.































 
 

ಸಮಾರೋಪ ಸಮಾರಂಭ :

ಸಮಾರೋಪದ ಸಮಾರಂಭದಲ್ಲಿ ಬೆಂಗಳೂರಿನ ನ್ಯಾಯವಾದಿ, ಕಲಾವಿದೆ ಮಾಳವಿಕಾ ಅವಿನಾಶ್ ಮುಖ್ಯ ಭಾಷಣ ಮಾಡಿ, ವಿವಿಧ ಆಸೆ, ಆಮಿಷಗಳಿಗೊಳಗಾಗಿ ಲವ್ ಜಿಹಾದ್ ಮೂಲಕ ಯುವತಿಯರು ತಮ್ಮ ಧರ್ಮವನ್ನು ತೊರೆದು ಅನ್ಯ ಧರ್ಮದ ಕಟ್ಟುಪಾಡಿಗೊಳಗಾಗುವ ಮೊದಲು ತಮ್ಮ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ. ಹಿಂದೂ ಧರ್ಮದಲ್ಲಿ ಏಕ ಪತ್ನಿ ಸಂಸ್ಕಾರವಿದ್ದು, ಮಹಿಳೆಯರು ಪತಿಯೊಂದಿಗೆ ಸಮಾನ ಹಕ್ಕುಗಳಿಗೆ ಬಾಧ್ಯಸ್ಥಳಾಗಿದ್ದರೆ ಮುಸ್ಲಿಂ ಧರ್ಮದಲ್ಲಿ ಬಹು ಪತ್ನಿತ್ವದ ಪದ್ಧತಿಯಿದೆ. ಅನ್ಯ ಧರ್ಮೀಯರನ್ನು ವಿವಾಹವಾಗುವ ಹಿಂದೂ ಯುವತಿ ತನ್ನ ಸಮಾನ ಹಕ್ಕುಗಳಿಂದ ವಂಚಿತಳಾಗುತ್ತಾಳಲ್ಲದೆ ಬಹುಪತ್ನಿತ್ವದಡಿ ಓರ್ವಳಾಗಿ ಬದುಕು ಸಾಗಿಸುವ ಅನಿವಾರ್ಯತೆ ಒದಗಿ ಬರುತ್ತದೆ ಎಂದು ವಿಶ್ಲೇಷಿಸಿದರು.

ಭಾರತೀಯ ಚಿಂತನೆಯಲ್ಲಿ ವೇದ ಕಾಲದಿಂದಲೂ ಪುರುಷ ಮಹಿಳೆ ಎಂಬ ಬೇಧ ಭಾವ ಇರಲಿಲ್ಲ. ವಿದೇಶಿಯರ ಆಕ್ರಮಣ, ಶೋಷಣೆಯ ಭಯದಿಂದ ಹಿಂದಕ್ಕೆ ಸರಿಯಲಾರಂಭಿಸಿದ್ದಳು. ಇಂತಹ ಶೋಷಣೆಯಿಂದ ಪಾರಾಗಲು ಆತ್ಮಾಹುತಿಯಂತಹ ಭಯಾನಕ ಕೃತ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದಳು. ಅಂತೆಯೇ, ಅನೇಕ ವೀರ ಮಹಿಳೆಯರು ಕ್ಷಾತ್ರ ಪ್ರದರ್ಶನ ಮಾಡಿ ಸಾಹಸವನ್ನೂ ಮೆರೆದಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಅನ್ಯರು ಸುಧಾರಣೆ ಮಾಡಲು ಹೋಗಲಿಲ್ಲ. ಬದಲಾಗಿ ಧರ್ಮದೊಳಗಿನ ಮಂದಿ ಸಮಾಜದ ಸುಧಾರಣೆ ಮಾಡಿದ್ದಾರೆ. ಧರ್ಮದ ಸಂಸ್ಕೃತಿ, ಸಂಸ್ಕಾರವನ್ನು ನಾಶಪಪಡಿಸಿ ಸಮಾನತೆಯನ್ನು ಸಾಧಿಸುವ ಉದ್ದೇಶ ಹಿಂದೂ ಧರ್ಮಕ್ಕಿಲ್ಲ ಎಂದು ಮಾಳವಿಕಾ ಅವಿನಾಶ್ ಹೇಳಿದರು.

ಸಮಾರೋಪ ವಾಚನಗೈದ ವಿದ್ಯಾ ಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷೆ ಡಾ. ಲಕ್ಷ್ಮೀ ಎನ್. ಪ್ರಸಾದ್, ಹಿಂದೂ ಸಂಸ್ಕೃತಿ, ಪರಂಪರೆಯ ರಕ್ಷಣೆಯ ಹೊಣೆ ಮಹಿಳೆಯರ ಮೇಲಿದೆ. ಮಹಿಳೆಯರು ಕೀಳರಿಮೆಯನ್ನು ತೊಡೆದು ಹಾಕಿ ಮೀಸಲಾತಿಯ ಹಂಗಿಲ್ಲದೆ ‘ಮಹಿಳೆ ಅನಿವಾರ್ಯ’ ಎನ್ನುವಂತಾಗಬೇಕು. ನಮ್ಮ ಗುರಿ ವಿಕಾಸದ ಕಡೆಗೆ ಇರಬೇಕೇ ಹೊರತು ಆಕ್ರಮಣದ ಮೇಲಲ್ಲ. ಸಮಾಜಕ್ಕೆ ನಾವು ನೀಡಬೇಕಾಗಿರುವ ಕೊಡುಗೆಯ ಕುರಿತು ಚಿಂತನೆ ನಡೆಸಬೇಕಾಗಿದೆ ಎಂದರು.

ಹಿರಿಯ ವೈದ್ಯೆ, ಸಮಾಜ ಸೇವಕಿ ಡಾ. ಗೌರಿ ಪೈ ದೀಪ ಪ್ರಜ್ವಲಿಸಿ ಮಹಿಳಾ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕಮಲಾ ಪ್ರಭಾಕರ ಭಟ್ ಡಾ. ಗೌರಿ ಪೈ ಅವರನ್ನು ಗೌರವಿಸಿದರು. ವಿದುಷಿ ಪ್ರೀತಿಕಲಾ ವೈಯಕ್ತಿಕ ಗೀತೆ ಹಾಡಿದರು. ಸಮ್ಮೇಳನದ ವಿಭಾಗ ಸಹ ಸಂಚಾಲಕರಾದ ಗುಣವತಿ ಕೊಲ್ಲಂತಡ್ಕ ಪ್ರಸ್ತಾವಿಸಿದರು. ಶ್ರದ್ಧಾ ರೈ ಉಪಸ್ಥಿತರಿದ್ದರು.ಸಮಿತಿಯ ಪುತ್ತೂರು ಜಿಲ್ಲಾ ಸಂಚಾಲಕಿಯರಾದ ತೇಜಸ್ವಿನಿ ಶೇಖರ್ ಕಟ್ಟಪುಣಿ ಸ್ವಾಗತಿಸಿ, ಸುಗುಣ ವಂದಿಸಿದರು. ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top