ವಿಟ್ಲ: ಇಲ್ಲಿನ ಬಂಟ್ವಾಳ ತಾಲೂಕು ಗೌಡರ ಯುವ ವೇದಿಕೆ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಬಂಟ್ವಾಳ ತಾಲೂಕು ಗೌಡರ ಮಹಿಳಾ ಘಟಕದ ಸಹಕಾರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಗೌಡರ ಕ್ರೀಡೋತ್ಸವ ಡಿ. 3ರಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ರಾಷ್ಟ್ರಧ್ವಜವನ್ನು ವಿಶ್ವ ಮಟ್ಟಕ್ಕೆ ಎತ್ತಿ ತೋರಿಸಲು ಇರುವ ಏಕೈಕ ಕ್ಷೇತ್ರ ಕ್ರೀಡೆ. ಒಲಿಂಪಿಕ್ ಕ್ರೀಡಾಕೂಟದಲ್ಲೂ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುವ ಮೂಲಕ, ವಿಶ್ವಕ್ಕೆ ಭಾರತದ ಘನತೆ, ಗೌರವವನ್ನು ಪಸರಿಸುವ ಕೆಲಸ ನಡೆಯುತ್ತಿದೆ. ಹಾಗಾಗಿ ಕ್ರೀಡಾ ಕ್ಷೇತ್ರ ತನ್ನದೇ ಆದ ಮಹತ್ವವನ್ನು ಪಡೆದಿದೆ. ಗೌಡರ ಕ್ರೀಡೋತ್ಸವ ಸಮುದಾಯದ ಕ್ರೀಡೋತ್ಸವವಾದರೂ, ಇಂತಹ ಮೈದಾನಗಳಿಂದ ಹೊರಬರುವ ಕ್ರೀಡಾ ಪ್ರತಿಭೆಗಳು ದೇಶದ ಕೀರ್ತಿಯನ್ನು ವಿಶ್ವಕ್ಕೆ ಹರಡುವಂತೆ ಮಾಡಲಿ ಎಂದು ಹಾರೈಸಿದರು.
ಪುತ್ತೂರು ಎಸ್.ಆರ್.ಕೆ. ಲ್ಯಾಡರ್ಸ್’ನ ಕೇಶವ ಎ. ಮಾತನಾಡಿ, ಒಂದು ಬಿಂದುವಿನಿಂದ ಬ್ರಹ್ಮಾಂಡ ಸೃಷ್ಟಿ ಸಾಧ್ಯ. ಅಂದರೆ ಹಲವು ಬಿಂದುಗಳು ಸೇರಿ ಸಂಘಟನೆ ಆಗುತ್ತದೆ. ಒಗ್ಗಟ್ಟಿನಿಂದ ನಾವು ಮುಂದುವರಿದಾಗ ಕೆಲಸ ಯಶಸ್ಸು ಸಾಧ್ಯ. ಹಾಗೆಂದು ಜಾತಿಯ ಅಂಧಾನುಕರಣೆ ಬೇಡ. ಅಭಿಮಾನ ಬೇಕು. ಎಲ್ಲಾ ಜಾತಿಗಳನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗಬೇಕಾದ ಅವಶ್ಯಕತೆ ಇಂದು ಇದೆ ಎಂದ ಅವರು, ಡಿ. 26ರಂದು ಕಡಬ ಗೌಡ ಸಮುದಾಯ ಭವನದ ಶಿಲಾನ್ಯಾಸ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು, ಸಹಕರಿಸುವಂತೆ ಮನವಿ ಮಾಡಿದರು.
ನಿವೃತ್ತ ಸೈನಿಕ ಧನಂಜಯ್ ಗೌಡ ನಾಯ್ತೊಟ್ಟು ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ಹೊರತರಲು ಇಂತಹ ವೇದಿಕೆಗಳು ಸೂಕ್ತ. ಇಂತಹ ಪ್ರಯತ್ನಗಳಿಂದಲೇ ದೊಡ್ಡ ಮಟ್ಟದ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಟ್ಲ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಮೋನಪ್ಪ ಗೌಡ ಶಿವಾಜಿನಗರ ಮಾತನಾಡಿ, ಸಮಾಜದಲ್ಲಿ ಸಮುದಾಯದ ಜವಾಬ್ದಾರಿ ತುಂಬಾ ಇದೆ. ಇಂತಹ ಜವಾಬ್ದಾರಿಗಳನ್ನು ನಿಭಾಯಿಸುವಾಗ ಒಗ್ಗಟ್ಟಾಗಿ ಮುಂದುವರಿಯಬೇಕು ಎಂದರು.
ಇದೇ ಸಂದರ್ಭ ಕ್ರೀಡಾ ಸಾಧಕರಾದ ಮನನ್, ಲಿಖಿತ್ ಎಸ್., ಮೋಕ್ಷಿತ್, ಪೂಜಾ, ರಿತೇಶ್ ಹಾಗೂ ಬೆಂಗಳೂರು ಕಂಬಳದಲ್ಲಿ ಕೋಣಗಳನ್ನು ಓಡಿಸಿ ಪದಕ ಗಳಿಸಿದ್ದ ಧನಂಜಯ ಗೌಡ, ಕೃತಿಕ್ ಗೌಡ ಅವರನ್ನು ಸನ್ಮಾನಿಸಲಾಯಿತು. ಗೌಡರ ಕ್ರೀಡೋತ್ಸವದ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.