ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಅಡಿಪಾಯ | ಬೊಳುವಾರಿನಲ್ಲಿ ನಡೆದ ಗುರುಪಾದ ಪೂಜೆಯಲ್ಲಿ ಆನೆಗುಂದಿ ಶ್ರೀ

ಪುತ್ತೂರು: ಶಿಕ್ಷಣ ಎಲ್ಲಾ ವಿಚಾರಗಳಿಗೂ ಮೂಲ. ಆದ್ದರಿಂದ ಸಮುದಾಯ, ಸಮಾಜವನ್ನು ಕಟ್ಟಲು ಶಿಕ್ಷಣವನ್ನೇ ಅಡಿಪಾಯವಾಗಿ ಬಳಸಿಕೊಳ್ಳಬೇಕು ಎಂದು ಆನೆಗುಂದಿ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಭಾನುವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿದ ಸಾಮೂಹಿಕ ಶ್ರೀ ಗುರುಪಾದ ಪೂಜೆಯಲ್ಲಿ ಅವರು ಆಶೀರ್ವಚನ ನೀಡಿದರು.

ಶಿಕ್ಷಣದ ಜೊತೆಗೆ ಸಂಯಮವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಂಯಮ ಇದ್ದಾಗ ಮಾತ್ರ ಎಲ್ಲಾ ವ್ಯವಸ್ಥೆಗಳು ನಮ್ಮ ಜೊತೆಗಿರುತ್ತವೆ. ಸಂಯಮದಿಂದ ಯಶಸ್ಸು ಸಾಧ್ಯ. ಆದರೆ ಯಶಸ್ಸು ಪಡೆಯುವ ಹಾದಿಯಲ್ಲಿ ಇನ್ನೊಬ್ಬರ ಸಾಧನೆಯನ್ನು ನೋಡಿ ಸಂತೋಷ ಪಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.































 
 

ಜೀವನದಲ್ಲಿ ಯಾವುದೇ ಕೆಲಸವನ್ನು ಸಾಧಿಸಬೇಕಾದರೂ ನಿಷ್ಠೆ ಅತೀ ಅಗತ್ಯ. ನಿಷ್ಠೆಯಿಂದ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ಒಳಿತು – ಕೆಡುಕನ್ನು ಭಗವಂತನಿಗೆ ಬಿಟ್ಟು, ನಿಷ್ಠೆಯಿಂದ ಕಾರ್ಯತತ್ಪರರಾಗಿ ಎಂದ ಅವರು, ಆಯ್ಕೆಯ ವಿಚಾರವನ್ನು ಭಗವಂತನಿಗೇ ಬಿಡಿ. ಯಾಕೆಂದರೆ ನಾವು ಆಯ್ಕೆ ಮಾಡಿದರೆ ಅದು ಸೀಮಿತವಾಗಿರುತ್ತದೆ. ಭಗವಂತ ಆಯ್ಕೆ ಮಾಡಿ ನೀಡಿದರೆ ಅಸೀಮವಾಗಿರುತ್ತದೆ ಎಂದರು.

ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಅಧ್ಯಕ್ಷತೆ ವಹಿಸಿದ್ದರು. ಕಳಸ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘ ಅಧ್ಯಕ್ಷ ಪಿ.ಎ. ಕುಮಾರಸ್ವಾಮಿ ಕಳಸ, ದ.ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್. ಹರೀಶ್, ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷ ನಲ್ಕ ಗೋಪಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ವಿಶ್ವೇಶ್ವರ ಪುರೋಹಿತರ ಆಚಾರ್ಯತ್ವದಲ್ಲಿ ಗುರುಪಾದ ಪೂಜೆ ಜರಗಿತು. ಪ್ರಭಾಹರೀಶ್ ಆಚಾರ್ಯ ಪರ್ಲಡ್ಕ ಸ್ವಾಗತಿಸಿ, ಉದಯ ಕುಮಾರ್ ಆಚಾರ್ಯ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top