ಪುತ್ತೂರು: ಪ್ರೇರಣಾ ಸಂಸ್ಥೆಯ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ 2023 ಭಾನುವಾರ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಜರಗಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಚಿದಾನಂದ ಬೈಲಾಡಿ, ಕ್ವಿಜ್ ಸ್ಪರ್ಧೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ. 4 ಮಂದಿಯಿಂದ ಆರಂಭಗೊಂಡ ರೋಟರಿ ಸಂಸ್ಥೆ, ಇಂದು ವಿಶ್ವಾದ್ಯಂತ ಸೇವಾ ಚಟುವಟಿಕೆ ನಡೆಸುತ್ತಾ ಬರುತ್ತಿದೆ. ಅದೇ ರೀತಿ ಪ್ರೇರಣಾ ಸಂಸ್ಥೆಯೂ ಇನ್ನಷ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವಂತಾಗಲಿ ಎಂದು ಶುಭಹಾರೈಸಿದರು.
ನ್ಯೂಸ್ ಪುತ್ತೂರು ಅಧ್ಯಕ್ಷ ಕೇಶವ್ ಅಮೈ ಕಲಾಯಿಗುತ್ತು ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ರಸಪ್ರಶ್ನೆ ಸ್ಪರ್ಧೆಗಳು ಇದಕ್ಕೆ ಪೂರಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಆಡಳಿತ ನಿರ್ದೇಶಕ ಪ್ರವೀಣ್ ಕುಂಟ್ಯಾನ ಮಾತನಾಡಿ, ವಿವಿಧ ವಿದ್ಯಾಸಂಸ್ಥೆಗಳಲ್ಲಿ ಉನ್ನತ ವಿದ್ಯಾಭ್ಯಾಸದ ಕುರಿತು ಮಾಹಿತಿ ನೀಡುತ್ತಿರುವ ಪ್ರೇರಣಾ, ಹೊಸ ಕನಸುಗಳನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವತ್ತ ಗಮನ ಹರಿಸಬೇಕು ಎಂದರು.
ಪ್ರೇರಣಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ ಕೆಡೆಂಜಿ ಸ್ವಾಗತಿಸಿ, ನಿರ್ದೇಶಕ ಮುರಳೀಧರ ಕೆ.ಎಲ್. ವಂದಿಸಿದರು. ಪ್ರೇರಣಾ ನಿರ್ದೇಶಕ, ನ್ಯೂಸ್ ಪುತ್ತೂರು ಪ್ರಧಾನ ಕಾರ್ಯದರ್ಶಿ ವಸಂತ್ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಪ್ರೇರಣಾ ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.
ಬಳಿಕ ಪಿಯುಸಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಜರಗಿತು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸೀತಾರಾಮ ಕೇವಳ ಅವರು ಕ್ವಿಜ್ ಸ್ಪರ್ಧೆಯನ್ನು ನಡೆಸಿಕೊಟ್ಟರು. ಅಂತಿಮ ಸುತ್ತಿನ ಕ್ವಿಜ್ ಸ್ಪರ್ಧೆಯು ಡಿಸೆಂಬರ್ 31ರಂದು ಚುಂಚಶ್ರೀ ಸಭಾಭವನದಲ್ಲಿ ಜರಗಲಿದೆ.