ಪ್ರಜ್ಞಾ ಆಶ್ರಮದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ | ಕೇಶವ್ ಅಮೈ, ಮನು ಕುಮಾರ್, ನೇಹಾ ರೈ, ಅಬ್ದುಲ್ ಅಯೂಬ್, ಸುಬ್ರಮಣಿಗೆ ದಿವ್ಯಾಂಗ  ಸಾಧಕ ಪ್ರಶಸ್ತಿ ಪ್ರದಾನ

ಪುತ್ತೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ ಹಾಗೂ ವಿಶಿಷ್ಟ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಡಿ. 3ರಂದು ಬಿರುಮಲೆ ಬೆಟ್ಟದ ಪ್ರಜ್ಞಾಶ್ರಮದಲ್ಲಿ ನಡೆಯಿತು.

ಇದೇ ಸಂದರ್ಭ ವಿಶೇಷ ಚೇತನರಾಗಿ ವಿಶಿಷ್ಟ ಸಾಧನೆಯನ್ನು ಮಾಡಿದ ಯಶಸ್ವಿ ಉದ್ಯಮಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ್ ಅಮೈ, ಸಾಹಿತ್ಯ ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮನು ಕುಮಾರ್, ಶಿಕ್ಷಣ ಕ್ಷೇತ್ರದ ಕುಮಾರಿ ನೇಹಾ ರೈ, ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಲಾವಿದ ಅಬ್ದುಲ್ ಅಯೂಬ್, ಭಿನ್ನ ಸಾಮರ್ಥ್ಯದ ಜನರ ಸೇವೆಗಾಗಿ ಎಂ.ವಿ. ಗ್ರೂಪ್ ಆಫ್ ಸೋಶಿಯಲ್ ಸರ್ವಿಸಸ್ ಪುತ್ತೂರು ಇದರ ಪಿ.ವಿ. ಸುಬ್ರಮಣಿ ಅವರಿಗೆ ದಿವ್ಯಾಂಗ  ಸಾಧಕ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಲಾಯಿತು.

ಸನ್ಮಾನ ನೆರವೇರಿಸಿ ಮಾತನಾಡಿದ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಪೋಷಕರು ವಿಶೇಷ ಚೇತನರಿಗೆ ನೆರವಾಗಬೇಕು. ಹಾಗೆಂದು ಸರ್ಕಾರದ ಸವಲತ್ತುಗಳಿಗೆ ಮಾತ್ರವೇ ಸೀಮಿತರಾಗಬೇಡಿ. ಸರ್ಕಾರದ ಸವಲತ್ತನ್ನು ಮೀರಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಿರುವ, ಸನ್ಮಾನ ಸ್ವೀಕರಿಸಿರುವ ವಿಶೇಷ ಚೇತನರೇ ಸ್ಫೂರ್ತಿಯಾಗಿ ನಮ್ಮ ಮುಂದಿದ್ದಾರೆ. ಅವರಂತೆಯೇ ಎಲ್ಲರೂ ಸಾಧನೆ ಮಾಡುವಂತಾಗಬೇಕು ಎಂದು ಶುಭಹಾರೈಸಿದರು.



































 
 

ಕಾರ್ಯಕ್ರಮದಲ್ಲಿ ಭಿನ್ನ ಸಾಮರ್ಥ್ಯದ ಪ್ರತಿಭೆಗಳಿಗಾಗಿ ಕವಿ ಗೋಷ್ಠಿ, ಕಥಾ ಗೋಷ್ಠಿ,, ಕನ್ನಡ ಗೀತ ಗಾಯನ, ಪ್ರತಿಭಾ  ಪ್ರದರ್ಶನ ಹಾಗೂ ವಿವಿಧ  ಮನೋರಂಜನ ಆಟೋಟ ಸ್ಪರ್ಧೆ, ಸಂತೋಷ ಕೂಟ     ನಡೆಯಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಾದುಗಾರ ಪುತ್ತೂರು ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕರಾದ ನಯನ ರೈ, ನವೀನ್ ಕುಮಾರ್, ರೋಟರಿ  ಅಸಿಸ್ಟೆಂಟ್ ಗವರ್ನರ್  ನರಸಿಂಹ ಪೈ, ವಲಯ ಸೇನಾನಿ ಝೇವಿಯರ್ ಡಿ’ಸೋಜ ಮುಖ್ಯ ಅತಿಥಿಗಳಾಗಿದ್ದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಉಪಸ್ಥಿತರಿದ್ದರು.

ಪ್ರಜ್ಞಾ ಆಶ್ರಮದ ಮುಖ್ಯಸ್ಥ ಅಣ್ಣಪ್ಪ ವಂದಿಸಿ, 34ನೇ ನೆಕ್ಕಿಲಾಡಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸೇಸಪ್ಪ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ  ಹಾಗೂ ಪುತ್ತೂರು ತಾಲೂಕು ವಿವಿದೋದ್ದೇಶ, ಗ್ರಾಮೀಣ ಹಾಗೂ ನಗರ ವಿಕಲಚೇತನರ ಪುನರ್ವಸತಿ  ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top