ಸುರತ್ಕಲ್: ಸುರತ್ಕಲ್ ನಿರುಪಯುಕ್ತ ಟೋಲ್ ಗೇಟ್ ನ ಕೆಲವು ಟೋಲ್ ಸಂಗ್ರಹ ಬೂತ್ ಗಳನ್ನು ಹೆದ್ದಾರಿ ಪ್ರಾಧಿಕಾರ ತೆರವುಗೊಳಿಸಿದೆ.
ದು ವರ್ಷದಿಂದ ಪಾಳು ಬಿದ್ದಿರುವ, ಮತ್ತೆ ಸುಂಕ ಸಂಗ್ರಹ ಆರಂಭದ ಕುರಿತು ಜನಸಾಮಾನ್ಯರಲ್ಲಿ ವದಂತಿ, ಆತಂಕಕ್ಕೆ ಇದು ಕಾರಣವಾಗಿತ್ತು.
ಈ ಬಗ್ಗೆ ಮಾತನಾಡಿದ ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಡಿ. 1ರಂದು ಸುರತ್ಕಲ್ ಟೋಲ್ ಸಂಗ್ರಹ ರದ್ದು ಗೊಂಡು ಹೋರಾಟ ಗೆಲುವು ಸಾಧಿಸಿದ ದಿನ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಗೆಲುವಿನ ಸಂಭ್ರಮಾಚರಣೆ ಹಾಗೂ ಅದೇ ಸಂದರ್ಭ ನಿರುಪಯುಕ್ತ ಟೋಲ್ ಗೇಟ್ ರಚನೆ ತೆರವು, ನಂತೂರು- ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿಸುವುದು ಸಹಿತ ಹೆದ್ದಾರಿಯ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹ ಸಭೆ ಆಯೋಜಿಸಿದೆ. ಇದಕ್ಕೆ ದೊಡ್ಡ ಪ್ರಮಾಣದ ಜನ ಬೆಂಬಲ ದೊರೆತಿದೆ. ಹೋರಾಟ ಸಮಿತಿಯೂ ಕಾರ್ಯಕ್ರಮದ ಯಶಸ್ಸಿಗೆ ವ್ಯಾಪಕ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಸಂಭ್ರಮಾಚರಣೆಯ ಮುನ್ನಾ ದಿನ ನಿರುಪಯುಕ್ತ ಟೋಲ್ ಗೇಟ್ ಪಾಳು ಬಿದ್ದ ಬೂತ್ ಗಳನ್ನು ತೆರವುಗೊಳಿಸಿ ರುವುದು ಕುತೂಹಲಕ್ಕೆ ಕಾರಣವಾಗಿದೆ. ಮತ್ತೆ ಹೋರಾಟ ಭುಗಿಲೇಳುವ ಸಾಧ್ಯತೆಗಳ ಹಿನ್ನಲೆಯಲ್ಲಿ ಈ ಅಲ್ಪ ಪ್ರಮಾಣದ ತೆರವು ಪ್ರಕ್ರಿಯೆ ನಡೆದಿದೆ ಎಂದು ಮುನೀರ್ ತಿಳಿಸಿದ್ದಾರೆ.