ಸ್ಪೈಡರ್​ಮ್ಯಾನ್​ನಂತೆ ಎಸ್ಕೇಪ್ ಆದ ಚಿನ್ನ ಕಳ್ಳ​: ಖದೀಮನ ಚಾಕಚಕ್ಯತೆ ಕಂಡು ದಂಗಾದ ಪೊಲೀಸರು!!

ಆಭರಣದ ಅಂಗಡಿಯೊಂದಕ್ಕೆ ನುಗ್ಗಿ ಬರೋಬ್ಬರಿ 3 ಕೆಜಿ ತೂಕದ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿದ್ದ ಖದೀಮನನ್ನು ಹಿಡಿಯಲು ಹೋದ ಪೊಲೀಸರು,​ ಆತನ ಸ್ಪೈಡರ್​ಮ್ಯಾನ್ ಸಾಹಸ ಕಂಡು ಒಂದು ಕ್ಷಣ ದಂಗಾದ ಪ್ರಸಂಗ ಜರುಗಿದೆ.

ಕೊಯಮತ್ತೂರಿನ ಆಭರಣದಂಗಡಿಗೆ ನಸುಕಿನ ಜಾವದಲ್ಲಿ ಗೋಡೆಯನ್ನು ಮೊದಲು ಒಡೆಯುವ ಖದೀಮ ಕಿರಿದಾದ ಕಿಂಡಿಯನ್ನು ಮಾಡಿ, ಅದರೊಳಗೆ ನುಸುಳಿ, ಮೂರನೇ ಮಹಡಿಗೆ ಸರಸರನೇ ಏರಿ, ​ ಆಭರಣದ ಅಂಗಡಿಗೆ ನುಗ್ಗುತ್ತಾನೆ. ಇದಾದ ಬಳಿಕ ತನ್ನ ಬಟ್ಟೆಯನ್ನು ಬದಲಾಯಿಸಿಕೊಂಡು, ಎಚ್ಚರಿಕೆಯಿಂದ ಸುಮಾರು 150 ಸವರನ್​ ಅಂದರೆ, 3 ಕೆಜಿಗೆ ಸಮನಾದ ಚಿನ್ನಾಭರಣಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ.

ಎಂಥಾ ದೊಡ್ಡ ಖದೀಮನೆ ಆದರೂ ಒಂದು ಸಣ್ಣ ಸುಳಿವು ಬಿಡಲೇಬೇಕು. ಈ ಖದೀಮನ ಸುಳಿವು ಮಾತ್ರ ತುಂಬಾ ಸುಲಭವಾಗಿ ಸಿಕ್ಕಿಬಿಟ್ಟಿತು. ಏಕೆಂದರೆ, ಚಿನ್ನಾಭರಣ ಅಂಗಡಿಯ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಖದೀಮನ ಮುಖ ಸ್ಪಷ್ಟವಾಗಿ ಸೆರೆಯಾಗಿತ್ತು. ಇದರಿಂದ ಸುಲಭವಾಗಿ ಗುರುತು ಪತ್ತೆಹಚ್ಚಿದ ಕೊಯಮತ್ತೂರು ಪೊಲೀಸರು ಆತನ ಪತ್ನಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಕ್ಕೆ ಪಡೆದರು. ಬುಧವಾರ ರಾತ್ರಿ ಖದೀಮನನ್ನು ಹಿಡಿಯಲು ಬಂದಾಗ ಆತ, ಪೊಲೀಸರ ಮುಂದೆಯೇ ಡೇಂಜರಸ್​ ಸಾಹಸ ಮಾಡಿ ಎಸ್ಕೇಪ್​ ಆಗಿದ್ದಾನೆ. 15 ಅಡಿ ಎತ್ತರದ ಮೇಲ್ಛಾವಣಿಯನ್ನು ಸರಸರನೇ ಏರಿ ಅಲ್ಲಿಂದ ಪರಾರಿಯಾಗಿದ್ದಾನೆ.































 
 

ಸದ್ಯ ನಾವು ನಿಜ ಜೀವನದ ಸ್ಪೈಡರ್​ಮ್ಯಾನ್​ನೊಂದಿಗೆ ಡೀಲ್​ ಮಾಡುತ್ತಿದ್ದೇವೆ ಎಂದು ಕೊಯಮತ್ತೂರು ನಗರ ಪೊಲೀಸ್​ ವಿಭಾಗದ ಉಪ ಪೊಲೀಸ್​ ಆಯುಕ್ತ ಜಿ ಚಂದೀಶ್​ ಹೇಳಿದ್ದಾರೆ.

ಖದೀಮನನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹರೂರ್ ಬಳಿಯ ದೇವರೆಡ್ಡಿಯೂರಿನ 24 ವರ್ಷದ ವಿಜಯ ಕುಮಾರ್​ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕನಿಷ್ಠ ನಾಲ್ಕು ಕಳ್ಳತನ ಪ್ರಕರಣಗಳಿವೆ. ಪೊಲೀಸರು ಆಭರಣ ಕಳ್ಳತನದ ದೃಶ್ಯವನ್ನು ಮರುಸೃಷ್ಟಿಸಲು ಪ್ರಯತ್ನಿಸಿದಾಗ ಸ್ವಲ್ಪ ಯಾಮಾರಿದ್ದರೆ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪ್ರಕಾರ ಖದೀಮ, ಆರಂಭದಲ್ಲಿ ಧೋತಿಯನ್ನು ಹೋಲುವ ಉಡುಪನ್ನು ಧರಿಸಿದ್ದನ್ನು. ಕಟ್ಟಡದೊಳಗೆ ಪ್ರವೇಶ ಪಡೆದು, ಗೋಡೆಯ ಕಿರಿದಾದ ಅಂತರದ ಮೂಲಕ ಮೂರು ಮಹಡಿಗಳನ್ನು ಹತ್ತಿದ ನಂತರ, ಆತ ಧೋತಿ ತೆಗದು ಟ್ರ್ಯಾಕ್ ಪ್ಯಾಂಟ್‌ ಬದಲಾಯಿಸಿಕೊಂಡನು.

ಆಭರಣ ಅಂಗಡಿಯ ನಿರ್ವಹಣೆಯ ಕಾರಣ, ಅಲಾರಾಂ ಆ ದಿನ ಕಾರ್ಯನಿರ್ವಹಿಸಲಿಲ್ಲ. ಇದು ಖದೀಮನಿಗೆ ವರವಾಯಿತು. ಹೀಗಾಗಿ ತಾಳ್ಮೆಯಿಂದ, ನಿಧಾನವಾಗಿ ಅಂಗಡಿಯ ಸುತ್ತ ತಿರುಗಿ ಸುಮಾರು 3.2 ಕೆಜಿ ತೂಕದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಆಯ್ಕೆ ಮಾಡಿಕೊಂಡನು. ಖದೀಮನಿಗೆ ಅಂಗಡಿಯ ವಿನ್ಯಾಸ ಮೊದಲೇ ತಿಳಿದಿತ್ತು ಎಂದು ಪೊಲೀಸರು ನಂಬಿದ್ದಾರೆ. ಆರಂಭದಲ್ಲಿ ಒಳಗಿನವರೇ ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಭಾವಿಸಲಾಗಿತ್ತು.

ಖದೀಮ ಅಂಗಡಿಯಿಂದ ಹೊರಬಂದ ನಂತರ ಒಂದು ಶರ್ಟ್ ಬಿಟ್ಟು ಹೋಗಿದ್ದ. ಅದರ ಜೇಬಿನಲ್ಲಿ ಪೊಲ್ಲಾಚಿ-ಕೊಯಮತ್ತೂರು ಬಸ್ ಟಿಕೆಟ್ ಕೂಡ ಇತ್ತು. ಆಭರಣ ಮಳಿಗೆಯ ಸಂಕೀರ್ಣದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಆತನ ಭಾಗಶಃ ಬೆರಳಚ್ಚುಗಳು ಸಹ ಇತ್ತು. ಸಿಸಿಟಿವಿ ಕ್ಯಾಮೆರಾಗಳನ್ನು ಬೇರೆಡೆಗೆ ತಿರುಗಿಸಲು ಆತ ಯತ್ನಿಸಿದ್ದ ಎನ್ನಲಾಗಿದೆ. ಈ ಎರಡು ಸುಳಿವುಗಳು ಪೊಲೀಸರ ತನಿಖೆಗೆ ಮಹತ್ವದ ತಿರುವು ನೀಡಿತು. ಅಂತಿಮವಾಗಿ ಪೊಲೀಸರು, ಖದೀಮ ವಿಜಯಕುಮಾರ್​ ಅಡಗಿದ್ದ ಆನಮಲೈನಲ್ಲಿರುವ ಸ್ನೇಹಿತನ ಮನೆಯನ್ನು ಪತ್ತೆಹಚ್ಚಿದರು. ಆದರೆ, ಬುಧವಾರ ರಾತ್ರಿ ಪೊಲೀಸರು ಅಲ್ಲಿಗೆ ಬರುವಷ್ಟರಲ್ಲಿ ಖದೀಮ ಅಲ್ಲಿಂದ ಎಸ್ಕೇಪ್​ ಆಗಿದ್ದ. ಕೊಯಮತ್ತೂರು ಪೊಲೀಸರ ಪ್ರಕಾರ, ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಗಂಟೆಗಳ ಹಿಂದೆಯೇ ಮತ್ತೊಂದು ಪೊಲೀಸ್ ತಂಡ ಅದೇ ಸ್ಥಳಕ್ಕೆ ಬಂದಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ, ವಿಜಯ್​ ಕುಮಾರ್​ ನಾಟಕೀಯವಾಗಿ ತಪ್ಪಿಸಿಕೊಂಡಿದ್ದಾರೆ. ಅದು ಹೇಗೆಂದರೆ, 15 ಅಡಿ ಎತ್ತರದ ಛಾವಣಿಯ ಮೇಲೆ ಹತ್ತಿ, ಒಂದೇ ಒಂದು ಮಣ್ಣಿನ ಹೆಂಚನ್ನು ತೆಗೆದು ಸ್ಪೈಡರ್​ ಮ್ಯಾನ್​ ರೀತಿ ಪರಾರಿಯಾದನು. ಸದ್ಯ ಆತನಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top