ಜನೌಷಧಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ, ಸಂವಾದ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಶವಂತಪುರ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ “ಪ್ರಧಾನಮಂತ್ರಿಗಳ ಜನೌಷಧಿ ಕೇಂದ್ರ”ಕ್ಕೆ ಭೇಟಿ ನೀಡಿ ಜನರ ಜೊತೆ ಸಂವಾದ ನಡೆಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರ್ಖಂಡ್‍ನ ದಿಯೋಘರ್‍ನ ಏಮ್ಸ್‍ನಲ್ಲಿ 10 ಸಾವಿರನೇ ಜನೌಷಧಿ ಕೇಂದ್ರವನ್ನು ಜನತೆಗೆ ಸಮರ್ಪಿಸಿದ್ದಾರೆ. ಮಧ್ಯಮ ವರ್ಗ ಮತ್ತು ಬಡಜನರಲ್ಲಿ ಜನೌಷಧಿ ಕೇಂದ್ರಗಳ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೆಲವು ಔಷಧಿಗಳು ಶೇ 70ರಷ್ಟು ಕಡಿಮೆ ದರಕ್ಕೆ ಲಭಿಸುತ್ತವೆ. ಕಳೆದ 9 ವರ್ಷಗಳಲ್ಲಿ, ದೇಶಾದ್ಯಂತ ಜನೌಷಧಿ ಕೇಂದ್ರಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದ ಅವರು, ಪ್ರಧಾನಿಯವರು ವಿಕಸಿತ ಭಾರತ್ ಸಂಕಲ್ಪ ಯಾತ್ರಾದ ವೇಳೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದನ್ನೂ ಅವರು ಗಮನಕ್ಕೆ ತಂದರು.































 
 

ದೇಶಾದ್ಯಂತ ಇರುವ ಜನೌಷಧಿ ಕೇಂದ್ರಗಳಲ್ಲಿ 1,800 ಕ್ಕೂ ಹೆಚ್ಚು ಔಷಧಗಳು, 285 ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಔಷಧಿ ಕ್ಷೇತ್ರಕ್ಕೆ ಪೂರಕ ವಸ್ತುಗಳು ಲಭ್ಯವಿವೆ ಎಂದು ಅವರು ತಿಳಿಸಿದರು.

ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿದೆ. ಕೈಗೆಟಕುವ ದರದಲ್ಲಿ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲು ಜನೌಷಧಿ ಕೇಂದ್ರಗಳ ಸ್ಥಾಪನೆ ಈ ದಿಸೆಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ ಒಂದು ಎಂದು ಸಚಿವರು ಜನರಿಗೆ ತಿಳಿಸಿದರು.

ಸಾಮಾನ್ಯ ಕಾಯಿಲೆಗಳಾದ ಜ್ವರ, ಕೆಮ್ಮು ಮತ್ತು ನೆಗಡಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಔಷಧಿಗಳು ಇಲ್ಲಿ ಲಭಿಸುತ್ತವೆ. ಕ್ಯಾನ್ಸರ್ ಮತ್ತು ಹೃದ್ರೋಗದಂಥ ಮಾರಣಾಂತಿಕ ಕಾಯಿಲೆಗಳಿಗೆ ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಲಭ್ಯವಿವೆ ಎಂದು ಅವರು ತಿಳಿಸಿದರು. ಬ್ರಾಂಡೆಡ್ ಔಷಧಿಗಳ ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಇಲ್ಲಿನ ದರ ಅತ್ಯಂತ ಕಡಿಮೆ ಎಂದು ಮಾಹಿತಿ ನೀಡಿದರು.

ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಈ ಸಂದರ್ಭದಲ್ಲಿ ಹಾಜರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top