ಪುತ್ತೂರು: ಪುತ್ತೂರು ಜಿಲ್ಲೆ ಮಹಿಳಾ ಸಮನ್ವಯ ಹಾಗೂ ಕೇಶವ ಸ್ಮೃತಿ ಸಂವರ್ಧನ ಸಮಿತಿ ಜಂಟಿ ಆಶ್ರಯದಲ್ಲಿ ಮಹಿಳೆ ಇಂದು ಮತ್ತು ನಾಳೆ ಕುರಿತು ‘ನಾರಿ ಶಕ್ತಿ ಸಂಗಮ’ ಡಿ.3 ಭಾನುವಾರ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯ ಪುತ್ತೂರು ಜಿಲ್ಲಾ ಸಂಚಾಲಕಿ ರೂಪಲೇಖ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2025ನೇ ಇಸವಿಗೆ ಆರ್ ಎಸ್‍ಎಸ್ ಗೆ 100 ವರ್ಷ ತುಂಬಲಿದ್ದು, ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಲ್ಲಿ ಜಾಗೃತಿ, ರಾಷ್ಟ್ರೀಯ ಚಿಂತನೆ, ಮಹಿಳಾ ಸುರಕ್ಷತೆ, ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡುವುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ವೈದ್ಯರು, ವಕೀಲರು, ಅಧ್ಯಾಪಕಿಯರು, ಸ್ವಯಂ ಸೇವಾ ಸಂಸ್ಥೆಯವರು, ಮಹಿಳಾ ಸಂಘಗಳು, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು, ವಿದ್ಯಾರ್ಥಿನಿಯರು, ಹೋರಾಟಗಾರ್ತಿಯರು ಹೀಗೆ ಸಮಾಜದ ಬೇರೆ ಆಯಾಮಗಳ ಸುಮಾರು 11 ಕ್ಷೇತ್ರದ ಮಹಿಳೆಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದು, 1500 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈಗಾಗಲೇ ದೇಶದ ಹಲವಾರು ಕಡೆಗಳಲ್ಲಿ ಸಮಾವೇಶ ಆಯೋಜಿಸಲಾಗಿದ್ದು, 455 ಮಹಿಳಾ ಸಮ್ಮೇಳನಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ತನಕ ನಡೆಯುವ ಸಮಾವೇಶವನ್ನು ಸಮಾಜ ಸೇವಕಿ, ಹಿರಿಯ ವೈದ್ಯೆ ಡಾ.ಗೌರಿ ಪೈ ಉದ್ಘಾಟಿಸಲಿದ್ದು, ಬೆಂಗಳೂರಿನ ನ್ಯಾಯವಾದಿ, ಕಲಾವಿದೆ ಮಾಳವಿಕಾ ಅವಿನಾಶ್ ಮುಖ್ಯ ಭಾಷಣ ಮಾಡಲಿದ್ದಾರೆ. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷೆ, ಆಯುರ್ವೇದ ವೈದ್ಯೆ ಡಾ.ಲಕ್ಷ್ಮೀ ಎನ್. ಪ್ರಸಾದ್ ಸಮಾರೋಪ ಭಾಷಣ ಮಾಡುವರು ಎಂದು ಅವರು ತಿಳಿಸಿದರು.
ಸಮಾವೇಶದಲ್ಲಿ ನೇಕಾರರಿಂದ ನೇಯ್ದ ಸೀರೆಗಳ ಮಳಿಗೆ, ಗೋವು ಉತ್ಪನ್ನಗಳು, ಕರಕುಶಲ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸಮನ್ವಯ ಪುತ್ತೂರು ಜಿಲ್ಲಾ ಸಂಚಾಲಕಿ ತೇಜಸ್ವಿ, ತಾಲೂಕು ಸಹಸಂಚಾಲಕಿ ವಿದ್ಯಾಗೌರಿ, ಸ್ವಾಗತ ಸಮಿತಿ ಸದಸ್ಯೆ ರಾಜೀ ಬಲರಾಮ್, ಕೇಶವ ಸ್ಮೃತಿ ಸಂವರ್ಧನ ಸಮಿತಿ ಟ್ರಸ್ಟಿ ಗಜಾನನ ಪೈ ಉಪಸ್ಥಿತರಿದ್ದರು.