ಜಿಲ್ಲಾ ಕೇಂದ್ರ ಸಹಕಾರಿ ಸಂಘಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ | ನವೋದಯ ಸ್ವಸಹಾಯ ಸಂಘದ ಸದಸ್ಯರಿಂದ ಆಕರ್ಷಕ ಪಥಸಂಚಲನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಹಾಗೂ ನವೋದಯ ಸ್ವಸಹಾಯ ಸಂಘಗಳ ಸದಸ್ಯರುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಗುರುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು.

ರಾಜ್ಯ ಅಬಕಾರಿ ಸಚಿವ ಆರ್‍.ಬಿ.ತಿಮ್ಮಾಪುರ ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಆರ್ಥಿಕ ಸಬಲೀಕರಣದ ಜತೆ ಸ್ವಾವಲಂಬಿ ಜೀವನ ನಡೆಸಲು ಸಹಕಾರಿ ಕ್ಷೇತ್ರದ ಮೂಲಕ ಅನುವು ಮಾಡಿ ಕೊಟ್ಟಿರುವುದು ಅದ್ಭುತ ಕೆಲಸ. ಸುಮಾರು 15 ಸಾವಿರ ಮಂದಿ ಪಾಲ್ಗೊಳ್ಳುವ ಮೂಲಕ ಕ್ರೀಡಾಕೂಟಕ್ಕೆ ಹೊಸ ಆಯಾಮವನ್ನು ಎಂ.ಎನ್.ರಾಜೇಂದ್ರ ಕುಮಾರ್ ತಂದಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇಂದಿನ ಕ್ರೀಡಾಕೂಟ ಸಾಕ್ಷಿ ಎಂದ ಅವರು, ಸೌಹಾರ್ದತೆ ಸಹಕಾರಿ ರಂಗದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮೆರವಣಿಗೆ ಉದ್ಘಾಟಿಸಿ, ಧ್ವಜಾರೋಹಣ ಮಾಡಿ, ಗ್ರಾಮೀಣ ಮಟ್ಟದಲ್ಲಿ ಒಲಿಪಿಂಗ್ ಮಾದರಿಯಲ್ಲಿ ಕ್ರೀಡಾಕೂಟ ಆಯೋಜನೆ ಮಾಡಬಹುದು ಎಂಬುದಕ್ಕೆ ಇಂದಿನ ಕ್ರೀಡಾಕೂಟ ಸಾಕ್ಷಿ. ಇದು ಸ್ವರ್ಣಾಕ್ಷರದಲ್ಲಿ ಬರೆದಿಡುವ ಸ್ಮರಣೀಯ ದಿನವಾಗಿದೆ ಎಂದ ಅವರು, ಹಳ್ಳಿ ಹಳ್ಳಿಗಳಲ್ಲೂ ಮಹಿಳೆಯರಲ್ಲಿ ಆರ್ಥಿಕ ಸಬಲತೆಯನ್ನು ಕಾಡುವಂತಾಗಲು ರಾಜೇಂದ್ರ ಕುಮಾರ್ ಅವರ ಸಾಧನೆ ಮಹತ್ತರವಾದದ್ದು. ಇನ್ನಷ್ಟು ಅವರ ಕಾರ್ಯ ಬೆಳಗಲಿ ಎಂದರು.































 
 

ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ  ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆರಿಗೆ ಆರ್ಥಿಕ ಸಬಲತೆ ನೀಡುವ ಜತೆಗೆ ಸಾವಿರಾರು ಉದ್ಯೋಗ ನೀಡುವಲ್ಲಿ ಎಂ.ಎನ್.ರಾಜೇಂದ್ರ ಕುಮಾರ್ ಅವರ ಶ್ರಮ ಅಪಾರ. ಎಲ್ಲಾ ಜಾತಿ-ಧರ್ಮದವರನ್ನು ಮುಂದಿಟ್ಟುಕೊಂಡು ಇಂದು ಕ್ರೀಡಾಕೂಟ ನಡೆಸಿರುವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನವಭಾರತವನ್ನು ಇಂದು ನಡೆಯುವ ಕ್ರೀಡಾಕೂಟದಲ್ಲಿ ನೋಡುವಂತಾಗಿದೆ. ರಾಜೇಂದ್ರ ಕುಮಾರ್ ಅವರು ನವೋದಯ ಚಾರಿಟೇಬಲ್ ಟ್ರಸ್ಟ್ ಮಾಡುವ ಮೂಲಕ ಕ್ಷಿಪ್ರ ಕ್ರಾಂತಿಯನ್ನು ಮಾಡಿದ್ದಾರೆ. ಸ್ವಾತಂತ್ರ್ಯೋತ್ತರದ ಪಿತಾಮಹಾ ಮೊಳಹಳ್ಳಿ ಶಿವರಾಯರಾದರೆ, ಸ್ವಾತಂತ್ರ್ಯ ನಂತರದ ಪಿತಾಮಹ ರಾಜೇಂದ್ರ ಕುಮಾರ್ ಎನಿಸಿಕೊಂಡಿದ್ದಾರೆ ಎಂದರು

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಅಧ್ಯಕ್ಷ ಡಾ.ಎಂ.ಎನ್‍.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಒಂದು ಕ್ಷೇತ್ರ ಯಶಸ್ವಿಯಾಗಲು ಕೆಲಸ ಮಾಡುವ ಜತೆಗೆ ಒಂದು ಕೈ ಮತ್ತೊಂದು ಕೈ ಜೋಡಿಸಿದರೆ ಮಾತ್ರ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂಬ ನಿಟ್ಟಿನಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ರಚನೆಯಾಗಿದೆ ಎಂದ ಅವರು, ಕ್ರೀಡೆಯಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕ ಅಶೋಕ್ ಕುಮಾರ್‍ ರೈ, ಕೇಂದ್ರ ಸಹಕಾರಿ ಬ್ಯಾಂಕ್‍ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಅವರನ್ನು ಸನ್ಮಾನಿಸಲಾಯಿತು. ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆಯನ್ನು ಅತಿಥಿಗಳು ನೀಡಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ರಾಮಕೃಷ್ಣ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು, ಸಹಾಯಕ ಆಯುಕ್ತ ಗಿರೀಶ್‍ನಂದನ್, ತಹಶೀಲ್ದಾರ್‍ಶಿವಶಂಕರ್, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿರ್ದೇಶಕರು, ಮತ್ತಿತರರು ಉಪಸ್ಥಿತರಿದ್ದರು. ಕೇಂದ್ರ ಸಹಕಾರಿ ಬ್ಯಾಂಕ್‍ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್‍ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವಸಹಾಯ ಸಂಘಗಳ ಸುಮಾರು 15 ಸಾವಿರ ಸದಸ್ಯರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಂಟ್ವಾಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳಿಂದ ನವೋದಯ ಸದಸ್ಯರು ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top