ಅಜ್ಜ ಸಾವನ್ನಪ್ಪಿದ ಎರಡೂವರೆ ಗಂಟೆಗಳ ಅಂತರದಲ್ಲಿ ರಸ್ತೆ ಅಪಘಾತದಲ್ಲಿ ಮೊಮ್ಮಗ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಶೇಡಿಮನೆಯಲ್ಲಿ ವಾಸ್ಥವ್ಯವಿರುವ ನಾರಾಯಣ ಪೂಜಾರಿ ವಯೋಸಹಜದಿಂದ ಮೃತಪಟ್ಟಿದ್ದರು. ಇದಾದ ಎರಡೂವರೆ ಗಂಟೆ ಬಳಿಕ ಮೊಮ್ಮಗ ನಿಶಾಂತ ಪೂಜಾರಿ (23) ವಾಹನ ಅಪಘಾತದಿಂದ ಮೃತಪಟ್ಟರು ಎನ್ನಲಾಗಿದೆ.
ಮೃತ ನಿಶಾಂತ ಚಾಮರಾಜನಗರದ ಮೆಡಿಕಲ್ ಕಾಲೇಜೊಂದರಲ್ಲಿ ಎರಡನೇ ವರ್ಷದ ಎಂಬಿ ವ್ಯಾಸಂಗ ಮಾಡುತ್ತಿದ್ದು, ಕಳೆದ ವಾರವಷ್ಟೆ ಊರಿಗೆ ಬಂದಿದ್ದ ನಿಶಾಂತ ಸೋಮವಾರ ಪರೀಕ್ಷೆ ಇದ್ದಿದ್ದರಿಂದ ಶನಿವಾರ ಚಾಮರಾಜನಗರಕ್ಕೆ ತೆರಳಿದ್ದ. ಆದರೆ ದುರ್ದೈವವ ಭಾನುವಾರ ಸಂಜೆ ಆರು ಗಂಟೆ ಸುಮಾರಿಗೆ ನಾರಾಯಣ ಮಾಷ್ಟ್ರು ವಯೋಸಹಜವಾಗಿ ಸಾವನ್ನಪ್ಪುತ್ತಾರೆ. ತಾತನ ಸಾವಿನ ಸುದ್ದಿ ಕೇಳಿದ ಮೊಮ್ಮಗ ಚಾಮರಾಜನಗರದಿಂದ ಊರಿಗೆ ಬರಲೆಂದು ತನ್ನ ಬೈಕಿನಲ್ಲಿ ಮೈಸೂರಿಗೆ ಬರುತ್ತಿದ್ದ ವೇಳೆ ಸುಮಾರು ರಾತ್ರಿ ಎಂಟೂವರೆ ಸಮಯಕ್ಕೆ ಚಾಮರಾಜನಗರ ತಾಲೂಕು ಪಣ್ಯದಹುಂಡಿ ಬಳಿ ಬೈಕ್ ಅಪಘಾತಗೊಂಡು ಸಾವನ್ನಪ್ಪಿದ್ದಾನೆ.
ಬಳಿಕ ನಿಶಾಂತನ ಮೃತ ದೇಹವನ್ನು ಸೋಮವಾರ ಶೇಡಿಮನೆಗೆ ತರಲಾಯಿತು. ಅಜ್ಜ ಮತ್ತು ಮೊಮ್ಮಗನ ದೇಹಗಳನ್ನು ಅಕ್ಕಪಕ್ಷದ ಚಿತೆಗಳಲ್ಲಿ ಜೊತೆಯಾಗಿ ಸುಡಲಾಯಿತು. ಅತೀ ಅಕ್ಕೆರೆಯಿಂದ ಇರುತ್ತಿದ್ದ ತಾತ ಮೊಮ್ಮಗ ಇಬ್ಬರೂ ಸಾವಿನಲ್ಲಿಯೂ ಒಂದಾಗಿರುವುದು ಇಡೀ ಗ್ರಾಮವೇ ದುಃಖದ ಮಡಿಲಿಗೆ ನೂಕಿದೆ.