ಕತ್ತಲ ಹೊತ್ತಲ್ಲಿ ಬೆಳಕ ಚಿಮ್ಮಿಸುತ್ತಾ ಬರುವ ಮಿಂಚುಹುಳ ಯಾರಿಗೆ ಗೊತ್ತಿಲ್ಲ ಹೇಳಿ!! ಹಳ್ಳಿಯ ಮನೆಗಳಲ್ಲಿ ಬಾಲ್ಯವನ್ನು ಕಳೆದವರಿಗೆ ಮಿಂಚುಹುಳವನ್ನು ಮರೆಯಲು ಸಾಧ‍್ಯವೇ ಇಲ್ಲ. ಆದರೆ ಇಂದು ಆ ಮಿಂಚುಹುಳಗಳು ಎಲ್ಲಿ ಹೋಗಿವೆ? ಅಪರೂಪಕ್ಕಾದರೂ ನೋಡಲು ಸಿಗಬೇಕಲ್ಲವೇ?
ಸಂಶೋಧಕರ ಪ್ರಕಾರ, ಪಶ್ಚಿಮ ಘಟ್ಟಗಳಲ್ಲಿಯೂ ಮಿಂಚುಹುಳುಗಳ ಸಂತತಿ ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳನ್ನು ಅವರು ನೀಡಿದ್ದಾರೆ.
ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಸಂಶೋಧಕರು ಜೀರುಂಡೆ ಜಾತಿಗಳು ಮತ್ತು ಅವುಗಳ ಪರಿಸರ ಪ್ರಾಮುಖ್ಯತೆಯ ಅಧ್ಯಯನವನ್ನು ಕೈಗೊಂಡಿದ್ದಾರೆ. ಎಂಪ್ರಿಯ ಸಂಶೋಧಕರು ಮಿಂಚುಹುಳುಗಳ ಮೇಲೆ ‘ಫೈರ್‌ಫ್ಲೈಸ್: ದಿ ಗ್ಲೋಯಿಂಗ್ ಜ್ಯುವೆಲ್ಸ್ ಆಫ್ ದಿ ವೈಲ್ಡ್’ ಎಂಬ ಶೀರ್ಷಿಕೆಯ ಅಧ್ಯಯನವನ್ನು ಸಹ ಕೈಗೊಂಡಿದ್ದಾರೆ.
ಮಿಂಚುಹುಳಗಳ ಅವನತಿಗೆ ಪ್ರಾಥಮಿಕ ಕಾರಣವೆಂದರೆ ಕೃತಕ ಬೆಳಕಿನ ಹೆಚ್ಚಿದ ಬಳಕೆ. ಹಳ್ಳಿಗಳಲ್ಲಿ ವಿದ್ಯುದ್ದೀಕರಣ ಮತ್ತು ಅರಣ್ಯಗಳಲ್ಲಿ ಕೃತಕ ಬೆಳಕಿನ ಬಳಕೆ ಪರಿಣಾಮ ಬೀರಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳ ನಿರ್ಮಾಣದಂತಹ ಪ್ರವಾಸೋದ್ಯಮ ಚಟುವಟಿಕೆಗಳಿಂದ ಮಿಂಚುಹುಳುಗಳ ಬದುಕಿಗೆ ಅಪಾಯವಾಗಿದೆ. ಕೃತಕ ಬೆಳಕಿನಿಂದಾಗಿ ಮಿಂಚುಹುಳಗಳು ಈಗ ಪರಸ್ಪರ ಸಂವಹನ ನಡೆಸಲು ಮತ್ತು ಸಂಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಸಂತತಿ ಬೆಳೆಯುವುದಿಲ್ಲ ಎಂದು ಸಂಶೋಧಕ ಮತ್ತು ಪ್ರಧಾನ ತನಿಖಾಧಿಕಾರಿ ಡಾ. ಎ.ಕೆ. ಚಕ್ರವರ್ತಿ ತಿಳಿಸಿದ್ದಾರೆ.
ನಿರ್ಮಾಣ ಕಾರ್ಯಗಳು, ವಿಶೇಷವಾಗಿ ರಸ್ತೆಗಳನ್ನು ವಿಸ್ತರಿಸುವ ಪ್ರದೇಶಗಳಲ್ಲಿ ಅವುಗಳ ಆವಾಸಸ್ಥಾನವು ಕುಗ್ಗುತ್ತಿದೆ. ಚಾರ್ಮಾಡಿ ಘಾಟ್ ವಿಭಾಗ, ಬ್ರಹ್ಮಗಿರಿ, ಲಕ್ಕವಳ್ಳಿ, ಚಿಕ್ಕಮಗಳೂರು ಮತ್ತು ಕಳಸವನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಮಿಂಚುಹುಳುಗಳು ಕಂಡುಬರುತ್ತವೆ. ಅಮೆರಿಕ ಮತ್ತು ಯುರೋಪ್’ನಲ್ಲಿ ಅಧ್ಯಯನಗಳು ಮಿಂಚುಹುಳುಗಳಲ್ಲಿ ಕಂಡುಬರುವ ಪ್ರೋಟೀನ್’ಗಳು ಮತ್ತು ಕಿಣ್ವಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತವೆ ಎಂದು ಜಿಕೆವಿಕೆಯ ಸಂಶೋಧಕರು ಹೇಳಿದ್ದಾರೆ. ವೈದ್ಯಕೀಯ ಉದ್ದೇಶಗಳಿಗಾಗಿ ಮಿಂಚುಹುಳುಗಳನ್ನು ಸೆರೆಹಿಡಿಯಲಾಗುತ್ತಿದೆ ಎಂಬ ವದಂತಿಯಿದೆ. ಈ ಅಂಶವನ್ನು ಸಹ ಅಧ್ಯಯನ ಮಾಡಿ ಅರಣ್ಯ ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.