ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಅದ್ವಯ ಕನ್ನಡ ಸಂಘ, ರೋಟರಾಕ್ಟ್ ಕ್ಲಬ್, ಅಕ್ಷಯ ಕಾಲೇಜ್ ಸಹಯೋಗದೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ನಿಧಿ-2015 ಕಾರ್ಯಕ್ರಮ ನಡೆಯಿತು.
ಹಿರಿಯ ಸಾಹಿತಿ ಜಯಪ್ರಕಾಶ್ ಪುತ್ತೂರು ಉಪನ್ಯಾಸ ನೀಡಿ, ಭಾರತದ ಮಾಜಿ ರಾಷ್ಟ್ರಪತಿ ಡಾ ಅಬ್ದುಲ್ ಕಲಾಮ್ ಅವರು ರಚಿಸಿದ “ವಿಂಗ್ಸ್ ಒಫ್ ಫೈರ್” ಕೃತಿಯನ್ನು “ಅಗ್ನಿಯ ರೆಕ್ಕೆಗಳು” ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದ ಮಾಡಿದ ರೋಚಕ ಅನುಭವಗಳನ್ನು ಹಾಗೂ ಅನುವಾದ ಮಾಡುವ ಸಂದರ್ಭದಲ್ಲಿ ಅನೇಕ ವಿಚಾರಗಳಲ್ಲಿ ಎಚ್ಚರಿಕೆಯನ್ನು ವಹಿಸ ಬೇಕಾಗುತ್ತದೆ ಎಂದು ತಿಳಿಸಿ, ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆಂಬ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಜಯಪ್ರಕಾಶ್ ಪುತ್ತೂರು ಅವರನ್ನು ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು.
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ವರದರಾಜ ಚಂದ್ರಗಿರಿ ಅವರು 2015ರಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಸಮಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿ ದತ್ತಿ ನಿಧಿ ಯನ್ನು ಸ್ಥಾಪಿಸಿದ್ದು, ಈ ದತ್ತಿ ನಿಧಿ ಪ್ರಕಾರ ಪ್ರತಿ ವರ್ಷವೂ ಪುತ್ತೂರು ತಾಲೂಕಿನ ಯಾವುದೇ ಸ್ಥಳದಲ್ಲಿ ಸಾಹಿತ್ಯ ಸಂಬಂಧಿತ, ಸಮಕಾಲಿನ ಸಾಹಿತ್ಯ ವಿಷಯದಲ್ಲಿ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.
ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ ನಡುಬೈಲು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೋಟರಾಕ್ಟ್ ಕ್ಲಬ್ ಸಭಾಪತಿ ರತ್ನಾಕರ ರೈ, ಸಂಯೋಜಕ ರಾಕೇಶ್, ಅಧ್ಯಕ್ಷ ಸತ್ಯನಾರಾಯಣ ನಾಯಕ್, ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ ಸ್ವಾಗತಿಸಿದರು. ಅದ್ವಯ ಕನ್ನಡ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಉಜ್ವಲ್ ನಾಯಕ್ ವಂದಿಸಿದರು. ಕೀರ್ತನ ಕಾರ್ಯಕ್ರಮ ನಿರೂಪಿಸಿದರು.