ತಿರುವನಂತಪುರಂ: ಸೋಮವಾರ ಸಂಜೆ ನಾಪತ್ತೆಯಾಗಿದ್ದ ಕೇರಳದ ಆರು ವರ್ಷದ ಬಾಲಕಿ ಕೊಲ್ಲಂನ ಆಶ್ರಮ ಮೈದಾನದಲ್ಲಿ ಪತ್ತೆಯಾಗಿದ್ದಾಳೆ. 20 ಗಂಟೆಗಳ ಹುಡುಕಾಟದ ಬಳಿಕ ಕೇರಳ ಪೊಲೀಸರು ಬಾಲಕಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಸಂಜೆ 6 ವರ್ಷದ ಬಾಲಕಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಟ್ಯೂಷನ್‌ಗೆ ತೆರಳುತ್ತಿದ್ದಾಗ ಅಪಹರಣಕಾರರು ಬಾಲಕಿಯನ್ನು ಅಪಹರಣ ಮಾಡಿದ್ದರು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಾಜ್ಯಾದ್ಯಂತ ನಾಕಾ ಬಂದಿ ನಡೆಸಿ ಬಾಲಕಿಯ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದರು. ಅಲ್ಲದೆ ಈ ನಡುವೆ ಅಪಹರಣಕಾರರು ಬಾಲಕಿಯ ಪೋಷಕರಿಗೆ ಕರೆ ಮಾಡಿ ಹತ್ತು ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಬಾಲಕಿಯ ಎಂಟು ವರ್ಷದ ಸಹೋದರನ ಪ್ರಕಾರ, ಅಪಹರಣಕಾರರು ಬಿಳಿ ಕಾರಿನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದ ಬಾಲಕನ ಮಾಹಿತಿಯ ಮೇರೆಗೆ ಪೊಲೀಸರು ಬಿಳಿ ಬಣ್ಣದ ಕಾರುಗಳನ್ನು ತಪಾಸಣೆ ನಡೆಸಲು ಆರಂಭಿಸಿದ್ದರು.
ಬಾಲಕಿಯ ಅಪಹರಣ ವಿಚಾರ ಗೊತ್ತಾಗುತ್ತಿದ್ದಂತೆ ಕೇರಳ ಸಿಎಂ ಪೊಲೀಸರೊಂದಿಗೆ ಮಾತನಾಡಿ, ಶೀಘ್ರದಲ್ಲಿ ಮಗುವನ್ನು ಪತ್ತೆ ಹಚ್ಚುವಂತೆ ನಿರ್ದೇಶನವನ್ನೂ ನೀಡಿದ್ದರು. ಇದಾದ ಬಳಿಕ ಪೊಲೀಸರು ತನಿಖೆಗಾಗಿ ಹೆಚ್ಚಿನ ತಂಡ ರಚಿಸಿ ಬಾಲಕಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಈ ನಡುವೆ ಸುಮಾರು 20 ಗಂಟೆಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಕೊಲ್ಲಂನ ಆಶ್ರಮ ಮೈದಾನ ಬಳಿ ಬಾಲಕಿ ಪತ್ತೆಯಾಗಿದ್ದಾಳೆ.
ಸದ್ಯ ಅಪಹರಣಗೊಂಡ ಬಾಲಕಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಅಪಹರಣಕಾರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.