ಪುತ್ತೂರು: ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ; ಯಾವುದೇ ವ್ಯಕ್ತಿಯ ಆಸ್ತಿಯೂ ಅಲ್ಲ.
ಹೀಗೆಂದು ಹೇಳಿದವರು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್.
ಮಂಗಳವಾರ ಪುತ್ತೂರಿನ ಮನಿಷಾ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯನಿರ್ವಹಣಾ ಸಮಿತಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಾಜ್ಯಾಧ್ಯಕ್ಷನಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಗುಂಪುಗಾರಿಕೆಗೆ ಅವಕಾಶ ನೀಡದೆ ಸಂಘಟನೆಯನ್ನು ಬೆಳೆಸಿದ್ದೇನೆ. ಪಕ್ಷದ ಹೆಸರಿನಲ್ಲಿ ವೈಯಕ್ತಿಕ ಪ್ರಚಾರ ತೆಗೆದುಕೊಂಡಿಲ್ಲ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಬದಲಾಗಿ ವಿಚಾರ ಆಧಾರಿತ ಪಕ್ಷ ಎಂದರು.
ನಳಿನ್ ಕುಮಾರ್ ಪಕ್ಷದ ಮುಂದೆ ಶೂನ್ಯ. ಯಾವತ್ತೂ ಪಕ್ಷವೇ ಮುಖ್ಯ, ಜವಾಬ್ದಾರಿ ನನ್ನಲ್ಲೇ ಇರಬೇಕು ಎನ್ನಲು ಪಕ್ಷ ಯಾರದ್ದೇ ಮನತನದ ಆಸ್ತಿಯೂ ಅಲ್ಲ. ನನ್ನ ಮನೆತನ, ನನ್ನ ರಕ್ತದಲ್ಲಿ ಎಂದಿಗೂ ರಾಜಕಾರಣ ಕಾಣುವುದಿಲ್ಲ. ರಾಜಕಾರಣ ಮಾಡಲು ನಾನು ರಾಜಕೀಯಕ್ಕೆ ಬಂದಿರುವವನೂ ಅಲ್ಲ. ಸುಳ್ಯದ ಕುಗ್ರಾಮದಲ್ಲಿದ್ದ ನನಗೆ ಸಂಘಟನೆ ಜವಾಬ್ದಾರಿ ನೀಡಿ ಬೆಳೆಸಿದೆ ಎಂದು ನಳಿನ್ ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ರಾಜ್ಯಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಉಪಾಧ್ಯಕ್ಷ ರಾಮದಾಸ್ ಬಂಟ್ವಾಳ, ನಗರ ಮಂಡಲ ಉಪಾಧ್ಯಕ್ಷ ಇಂದು ಶೇಖರ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಹಿರಿಯ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ವಿಶ್ವೇಶ್ವರ ಭಟ್ ಬಂಗಾರಡ್ಕ, ಬೂಡಿಯಾರ್ ರಾಧಾಕೃಷ್ಣ ರೈ, ಯುವರಾಜ್ ಪೆರಿಯತ್ತೋಡಿ, ನಿತೇಶ ಕುಮಾರ್ ಶಾಂತಿವನ, ಕಸ್ತೂರಿ ಪಂಜ, ರಾಜೇಶ್ ಕಾವೇರಿ ಮತ್ತಿತರರು ಉಪಸ್ಥಿತರಿದ್ದರು. ಪುರುಷೋತ್ತಮ ಮುಂಗ್ಲಿಮನೆ ಕಾರ್ಯಕ್ರಮ ನಿರೂಪಿಸಿದರು.