ಡಿ. 31ರಂದು ಸರಳ ಸಾಮೂಹಿಕ ವಿವಾಹ | ಹೀಗೆ ಅರ್ಜಿ ಸಲ್ಲಿಸಿ

ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ, ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರಕಾರದ ಆದೇಶದ ಪ್ರಕಾರ ಜ. 31ರಂದು ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ.

ಡಿ. 31 ವಧು-ವರರು ನಿಗದಿ ದಾಖಲೆಗಳೊಂದಿಗೆ ಶ್ರೀ ದೇವಳಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಆದ್ದರಿಂದ ಪುಣ್ಯ ಕ್ಷೇತ್ರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸರಳ ಸಾಮೂಹಿಕ ವಿವಾಹವಾಗಲು ಅಪೇಕ್ಷಿಸುವವರು ಶೀಘ್ರವೇ ಶ್ರೀ ದೇವಳದ ಕಚೇರಿಯಿಂದ ಅರ್ಜಿ ಪಡೆದು ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 08257-281224, 236200, 281700, 281423,281265 ಕರೆ ಮಾಡಬಹುದು ಅಥವಾ ಶ್ರೀ ದೇವಳದ ಕಚೇರಿ ವೇಳೆಯಲ್ಲಿ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ಜ.31ರಂದು ಬೆಳಗ್ಗೆ 11.20 ರಿಂದ 12.20ರ ವರೆಗಿನ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಲಿದೆ. ಜ. 5ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು. ಜ. 10 ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ. ಜ. 15ರಂದು ವಧುವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.



































 
 

ಅಗತ್ಯ ದಾಖಲೆಗಳು:
ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರ ಪ್ರತಿ, ಪಾಸ್ಪೋರ್ಟ್ ಸೈಜ್ ನ 2 ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್ ನಿಂದ ಅಥವಾ ಸಂಬಂಧಪಟ್ಟ ಸರಕಾರಿ ಇಲಾಖಾಧಿಕಾರಿಗಳಿಂದ ದೃಢಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.


ಸಹಾಯಹಸ್ತ:
ಸರಳ ಸಾಮೂಹಿಕ ವಿವಾಹವಾಗುವ ವರನಿಗೆ ಶ್ರೀ ದೇವಳದಿಂದ ಹೂವಿನ ಹಾರ, ಪಂಚೆ, ಶಲ್ಯ, ಶರ್ಟ್, ಪೇಟ, ಬಾಸಿಂಗಕ್ಕಾಗಿ ಪ್ರೋತ್ಸಾಹ ಧನವಾಗಿ ರೂ. 5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣ, ಕಾಲುಂಗುರ ಇತ್ಯಾದಿಗಳಿಗೆ ರೂ. 10 ಸಾವಿರ ನೀಡಲಾಗುವುದು. ಸುಮಾರು ರೂ. 40 ಸಾವಿರ ಮೌಲ್ಯದಲ್ಲಿ ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡನ್ನು ದೇವಾಲಯದಿಂದ ಖರೀದಿಸಿ ಒದಗಿಸಲಾಗುವುದು. ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗೆ ಊಟೋಪಚಾರ ಹಾಗೂ ಆವಶ್ಯಕ ವ್ಯವಸ್ಥೆಗಳನ್ನು ದೇವಳದಿಂದ ಮಾಡಲಾಗುವುದು. ಸರಳ ಸಾಮೂಹಿಕ ವಿವಾಹವಾಗುವ ವಧುವಿಗೆ ಕಂದಾಯ ಇಲಾಖೆಯ ವತಿಯಿಂದ ಆದರ್ಶ ವಿವಾಹ ಯೋಜನೆಯಡಿ ರೂ. 10 ಸಾವಿರ ನಿಶ್ಚಿತ ಠೇವಣಿ ಸೌಲಭ್ಯವನ್ನು ಒದಗಿಸಲಾಗುವುದು. ವಿವಾಹವಾಗುವ ಪರಿಶಿಷ್ಠ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸರಳ ವಿವಾಹ ಯೋಜನೆಯಡಿ ರೂ. 50 ಸಾವಿರಗಳನ್ನು ಒದಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top