ಪುತ್ತೂರು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಹಾಗೂ ಕಾವು ಗೋಪೂಜಾ ಸಮಿತಿ ಸಂಯುಕ್ತ ಆಶ್ರಯದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಅರ್ಚಕ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯರ ಪೌರೋಹಿತ್ಯದಲ್ಲಿ ಗೋಪೂಜೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದ ಪೂರ್ಣತ್ಮರಾಮ್ ಈಶ್ವರಮಂಗಲ, ಸನಾತನ ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು, ಪಂಚಗವ್ಯವು ಮಾರಕ ಕ್ಯಾನ್ಸರ್ ನಂತಹ ಖಾಯಿಲೆಯನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಇದು ವೈದ್ಯ ಲೋಕವೇ ಅಚ್ಚರಿ ಪಡುವ ಸಂಗತಿಯಾಗಿದೆ. ಗೋವಿನಿಂದ ಭೂಮಿಯು ಫಲವತ್ತಾಗಿ ಶುದ್ಧ ಆಹಾರದ ಜೊತೆಗೆ ಆರೋಗ್ಯವು ವೃದ್ಧಿಯಾಗುತ್ತದೆ. ಹೀಗಾಗಿ ಇಡೀ ಮನುಕುಲದ ಸಮೃದ್ಧಿಗೆ ಗೋವು ಅತೀ ಅಗತ್ಯ ಎಂದರು.
ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರ, ಆಚರಣೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಪ್ರತಿ ಮನೆಯಲ್ಲಿ ಹೆತ್ತವರು ಮಕ್ಕಳಿಗೆ ಸನಾತನ ಹಿಂದೂ ಧರ್ಮದ ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಹೇಳುವುದರ ಜೊತೆಗೆ ಗೋವಿನ ಮಹತ್ವವನ್ನು ತಿಳಿಸಬೇಕು ಎಂದರು.
ಕಾವು ಗೋಪೂಜಾ ಸಮಿತಿ ಗೌರವಾದ್ಯಕ್ಷ ಭಾಸ್ಕರ ಬಲ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, ಸನಾತನ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಯ ಪ್ರಕಾರ, 33 ಕೋಟಿ ದೇವತೆಗಳು ನೆಲೆಸಿರುವ ಗೋವು, ಹಿಂದೂ ಧರ್ಮದ ಆರಾಧನಾ ಶಕ್ತಿ ಎಂದ ಅವರು, ಜನರಲ್ಲಿ ಗೋಪೂಜೆಯ ಮಹತ್ವ ಹಾಗೂ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಮಿತಿಯ ವತಿಯಿಂದ ನಡೆಯುತ್ತಿದೆ ಎಂದರು.
ಗೋಪೂಜೆ ಸಮಿತಿ ಅಧ್ಯಕ್ಷ ನಹುಷಾ ಭಟ್ ಪಳನೀರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶವು ಕೃಷಿ ಸಂಪದ್ಭರಿತ ದೇಶವಾಗ ಬೇಕಾದರೆ ಗೋವಿನ ಪಾತ್ರ ಮಹತ್ವ. ಸನಾತನ ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯನೀಯ ಸ್ಥಾನವಿದ್ದು ಹೀಗಾಗಿ ವರ್ಷಕೊಮ್ಮೆ ಸಾಮೂಹಿಕ ಗೋಪೂಜೆ ನಡೆಸುವುದರ ಮೂಲಕ ಗೋವಿನ ಮಹತ್ವ ತಿಳಿಸುವ ಕಾರ್ಯ ಸುಮಾರು 12 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಗೋಪೂಜೆ ಸಮಿತಿ ವತಿಯಿಂದ ನಡೆಯುತ್ತಿದೆ. ಮುಂದೆಯೂ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಕಾವು ಬಜರಂಗದಳ ಸಂಚಾಲಕ ಕಿರಣ್, ಕಾವು,ಗೋರಕ್ಷ ಪ್ರಮುಖ್ ವಿಶ್ವನಾಥ ಬಾಳೆಕೊಚ್ಚಿ ಉಪಸ್ಥಿತರಿದ್ದರು.
ಗೋಪೂಜಾ ಕಾರ್ಯಕ್ರಮದಲ್ಲಿ ಪಂಚಲಿಂಗೇಶ್ವರ ಭಜನಾ ತಂಡ, ಪಳನೀರು ಓಂ ಶಕ್ತಿ ಭಜನಾ ತಂಡ, ಮಾಣಿಯಡ್ಕ ದುರ್ಗಾವಾಹಿನಿ ಭಜನಾ ತಂಡದಿಂದ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ನಡೆಯಿತು.
ಅತಿಥಿಗಳನ್ನು ಸೀತಾರಾಮ ಬಾಳೆಕೊಚ್ಚಿ, ಜಯರಾಮ ಪೂವಂದುರು, ಹರೀಶ್ ಎ. ಕೆ. ಮಾಡನ್ನೂರು, ಉದಿತ್ ಮಾಣಿಯಡ್ಕ, ಪ್ರಜ್ವಲ್ ಕೆರೆಮಾರು, ಅವಿನ್ ಮಾಣಿಯಡ್ಕ ಶಾಲು ಹಾಕಿ ಗೌರವಿಸಿದರು. ಗೋಪೂಜಾ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಬಲ್ಯಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾಣಿಯಡ್ಕ ವಂದಿಸಿದರು. ಪುತ್ತೂರು ಪ್ರಖಂಡ ಬಜರಂಗದಳ ಗ್ರಾಮಾಂತರ ಸಂಯೋಜಕ ವಿಶಾಖ್ ಸಸಿಹಿತ್ಳು ಕಾರ್ಯಕ್ರಮ ನಿರ್ವಹಿಸಿದರು.