ದೇವಸ್ಥಾನದಂತಿರುವ ಸಮಾಜದಲ್ಲಿ ಪ್ರತಿಯೊಬ್ಬರೂ ಕರ್ತವ್ಯಮುಖರಾಗಿ

ಕಡಬ: ಸಮಾಜ ದೇವಸ್ಥಾನದಂತೆ. ಇಲ್ಲಿ ಪ್ರತಿಯೊಬ್ಬರಿಗೂ ಕರ್ತವ್ಯ ಇದೆ. ಆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಕಡಬ ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸ ಸಮಾರಂಭಕ್ಕೆ ಪೂರ್ವಭಾವಿಯಾಗಿ ಭಾನುವಾರ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ, ಸಮುದಾಯದ ಜನಸಂಖ್ಯಾ ಸಮೀಕ್ಷೆ ಹಾಗೂ ಭವನ ನಿರ್ಮಾಣ ಸಹಾಯಾರ್ಥ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಹಿರಿಯರ ಮಾರ್ಗದರ್ಶನದೊಂದಿಗೆ ಪರಿಶ್ರಮದಿಂದ ಸಮಾಜವನ್ನು ಕಟ್ಟಿ ಬೆಳೆಸಿದ್ದೇವೆ. ವ್ಯಕ್ತಿಗತ, ಆರ್ಥಿಕ, ರಾಜಕೀಯ, ಸಾಮಾಜಿಕ ಸೇರಿದಂತೆ ಎಲ್ಲಾ ರೀತಿಯ ಬೆಳವಣಿಗೆಯ ದೃಷ್ಟಿಕೋನದಿಂದ ತಮ್ಮ ಅಸ್ತಿತ್ವವನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಯುತ್ತಿದೆ. ಕಡಬ ಪ್ರಾಂತ್ಯದಲ್ಲೂ ತಮ್ಮದೇ ಆದ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದು, ಹಾಕಿಕೊಂಡಿರುವ ಯೋಜನೆಗಳನ್ನು ಯಶಸ್ವಿಗೊಳಿಸಿ, ಸಮಾಜವನ್ನು ಬೆಳಗಿಸುವ ಕಾರ್ಯ ಆಗಬೇಕಾಗಿದೆ ಎಂದರು.































 
 

ಯೋಜನೆಯ ಮೊದಲ ಭಾಗವಾಗಿ ನೂತನ ಪದಾಧಿಕಾರಿಗಳ ಯೋಜನೆ ಹಾಕಿಕೊಂಡು, ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಹೊಸ ಸಂಘ ಕಟ್ಟಿದ್ದೀರಿ. ಎಲ್ಲರಿಗೂ ಬೆನ್ನೆಲುಬಾಗಿ ನಿಂತು, ಸಮುದಾಯವನ್ನು ಮೇಲೆತ್ತಲು ಸಂಘದ ಉದ್ಘಾಟನೆಯ ಹಂತಕ್ಕೆ ತಂದು ನಿಲ್ಲಿಸಿದ್ದೀರಿ. ಪ್ರತಿಯೊಬ್ಬರ ಮನೆ-ಮನ ಭೇಟಿ ಮಾಡಿ, ಮನೆ ಹಾಗೂ ಮನ ಎರಡನ್ನೂ ಪರಿವರ್ತನೆ ಮಾಡುವ ಕೆಲಸ ಮಾಡಿದ್ದೀರಿ. ಒಂದು ಸಾಮಾಜಿಕ ವ್ಯವಸ್ಥೆಯೊಳಗೆ ನೀವೆಲ್ಲರೂ ಧುಮುಕಿದ್ದೀರಿ. ಆತ್ಮಸ್ಥೈರ್ಯ, ಆತ್ಮವಿಶ್ವಾಸ, ಆತ್ಮಬಲ ನಿಮ್ಮಲ್ಲಿ ಬಂದಿದ್ದು, ಇದೀಗ ಶಂಕು ಸ್ಥಾಪನೆ ಮಾಡುವ ಯೋಜನೆ ಮುಂದಿಟ್ಟಿದ್ದೀರಿ. ಅಂತೂ ಇತಿಹಾಸದ ಪುಟದಲ್ಲಿ ಉಳಿಯುವ ಕೆಲಸವನ್ನು ನೀವೆಲ್ಲರೂ ಮಾಡುತ್ತೀರಿ ಎಂಬ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಪ ಸಮಯದಲ್ಲಿ ಮಾದರಿ ಕಾರ್ಯ: ಕಿರಣ್ ಬುಡ್ಲೆಗುತ್ತು

ಮಂಗಳೂರು ತಾಲೂಕು ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರೂ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಕಿರಣ್ ಬುಡ್ಲೆಗುತ್ತು ಮಾತನಾಡಿ, ಕಡಬದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಗೌಡ ಸಮುದಾಯ ಭವನ ಕೆಲಸಗಳು ಉತ್ತಮ ರೀತಿಯಲ್ಲಿ ನಡೆಯಬೇಕಾದರೆ ಎಲ್ಲರ ಸಹಕಾರವೂ ಅಗತ್ಯ. ಅಲ್ಪಸಮಯದಲ್ಲಿ ಮಾದರಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವುದು ಎಲ್ಲರೂ ಶ್ಲಾಘಿಸುವಂತಹ ವಿಷಯ. ಇದು ಸಮುದಾಯದ ಒಗ್ಗಟ್ಟನ್ನು ತೋರಿಸುತ್ತದೆ. ಮಾತ್ರವಲ್ಲ, ಅಧಿಕಾರಕ್ಕೆ ಆಶೆ ಪಡದೇ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವ ಮಾದರಿಯನ್ನು ಸಮಾಜದ ಮುಂದಿಡುತ್ತದೆ ಎಂದರು.

ಮುಂದಿನ ಕೆಲಸಗಳ ಯಶಸ್ಸಿಗೆ ಸಹಕರಿಸಿ: ಸುರೇಶ್ ಬೈಲು

ಕಡಬ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ, ಭವನ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಎಲ್ಲಾ ನಾಯಕರನ್ನು ಭೇಟಿಯಾಗಿ ಆಹ್ವಾನ ನೀಡಿದ್ದೇವೆ. ಎಲ್ಲರೂ ತುಂಬು ಸಹಕಾರ ನೀಡುವ ಭರವಸೆ ನೀಡಿದ್ದು, ಕಾರ್ಯಕ್ರಮ ದೊಡ್ಡ ಮಟ್ಟಿನಲ್ಲಿ ಯಶಸ್ವಿಯಾಗುವ ವಿಶ್ವಾಸ ಮೂಡಿದೆ. ಇದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ನಮ್ಮೊಂದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಸೇರಿದಂತೆ ಎಲ್ಲಾ ಸ್ವಾಮೀಜಿಗಳು ಆಗಾಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವುದು, ನಮಗೆ ಇನ್ನಷ್ಟು ಹುರುಪು ನೀಡಿದೆ ಎಂದರು.

ಎಸ್.ಕೆ. ಅಸೋಸಿಯೇಟ್ಸ್’ನ ಸುರೇಶ್ ಕುಮಾರ್ ಪಣೆಮಜಲು ಅವರು ಈಗಾಗಲೇ ಸಮುದಾಯ ಭವನದ ವಿನ್ಯಾಸವನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಈಗ ನಾವುಗಳು ನಮ್ಮ ಮುಂದಿರುವ ಕೆಲಸ, ಸವಾಲುಗಳತ್ತ ಗಮನ ಹರಿಸಬೇಕು. ಪ್ರತಿ ಕೆಲಸವೂ ಯಾವುದೇ ಸಮಸ್ಯೆಗಳಿಲ್ಲದೇ ಯಶಸ್ಸು ಕಾಣುವಂತಾಗಬೇಕು. ಇದಕ್ಕಾಗಿ ಪ್ರತಿ ಗ್ರಾಮದ, ವಲಯ ಹಾಗೂ ತಾಲೂಕಿನ ಯುವ ಸಂಘಟನೆಗಳು ನಮ್ಮೊಂದಿಗೆ ಸಹಕರಿಸಬೇಕು. ತಾಲೂಕಿನ ಎಲ್ಲಾ ಸಮುದಾಯ ಬಾಂಧವರು ಒಂದಾಗಿ ಕೆಲಸ ಮಾಡಬೇಕು. ಪ್ರತಿ ಬೈಲುವಾರು, ಗ್ರಾಮ ಸಮಿತಿ, ವಲಯ ಸಮಿತಿಯವರು ಆಮಂತ್ರಣವನ್ನು ತಲುಪಿಸಲು ಹಾಗೂ ಸಮಾಜದ ಜನಸಂಖ್ಯಾ ಸಮೀಕ್ಷೆಯ ಪೂರ್ವತಯಾರಿಗೆ ಒಗ್ಗೂಡಬೇಕು ಎಂದು ಕರೆ ನೀಡಿದರು.

ಸ್ಪಂದನ ಸಹಕಾರ ಸಂಘದ ಮುಖ್ಯಪ್ರವರ್ತಕ ಕೇಶವ ಅಮೈ, ತಾಲೂಕು ಉಪಾಧ್ಯಕ್ಷರುಗಳಾದ ವಾಡ್ಯಪ್ಪ ಗೌಡ ಎರ್ಮಾಯಿಲು, ಧರ್ಮಪಾಲ ಕಣ್ಕಲ್ಲು, ವೆಂಕಟರಾಜ್ ಕೋಡಿಬೈಲು, ರಾಧಾಕೃಷ್ಣ ಕೇರ್ನಡ್ಕ, ದಯಾನಂದ ಆಲಡ್ಕ, ಪಟೇಲ್ ಗೋಪಾಲಕೃಷ್ಣ ಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಕಾರ್ಯದರ್ಶಿ ಮಂಜುನಾಥ್ ಕೊಳಂತಾಡಿ, ಯುವ ಸಮಿತಿ ಅಧ್ಯಕ್ಷ ಪೂರ್ಣೇಶ್ ಬಲ್ಯ, ಮಹಿಳಾ ಸಮಿತಿ ಅಧ್ಯಕ್ಷೆ ವೀಣಾ ರಮೇಶ್ ಕೊಳ್ಳೆಸಾಗು, ಪ್ರಮುಖರಾದ ಡಾ. ಶಿವಕುಮಾರ್ ಹೊಸಳಿಕೆ, ಜನಾರ್ದನ ಗೌಡ ಪಣೆಮಜಲು, ತಿಮ್ಮಪ್ಪ ಗೌಡ ಕುಂಡಡ್ಕ, ವಿಶ್ವನಾಥ ನಡುತೋಟ, ನಿವೃತ್ತ ಪ್ರಾಂಶುಪಾಲ ಡಾ. ತಿಲಕ್ ಎ.ಎ., ಲೀಲಾವತಿ ಶಿವರಾಮ, ಲಾವಣ್ಯ ಮಂಡೆಕ್ಕರ, ಸಂಘಟನಾ ಕಾರ್ಯದರ್ಶಿ ಶಾರದಾ ಕೇಶವ್ ಬಿಳಿನೆಲೆ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ರಕ್ಷಿತ್ ಪುತ್ತಿಲ, ಕಿರಣ್ ಹೊಸಳಿಕೆ, ಮಹೇಶ್ ನಡುತೋಟ, ಸುನಿಲ್ ಕೇರ್ನಡ್ಕ, ಗಣೇಶ್ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಮ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು, ತಾಲೂಕಿನ ಎಲ್ಲಾ ಸಮಿತಿಯ ನಿರ್ದೇಶಕರು, ಸ್ಪಂದನ ಸಹಕಾರ ಸಂಘದ ನಿರ್ದೇಶಕರು, ಊರ ಗೌಡರು ಸಭೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು, ಬೆಂಗಳೂರು ಸಮಿತಿ:

ಕಡಬದಲ್ಲಿ ಹುಟ್ಟಿ ಬೆಳೆದು, ಕಾರ್ಯನಿಮಿತ್ತ ಅಥವಾ ಇನ್ನಾವುದೋ ಕಾರಣದಿಂದ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಸಮುದಾಯದವರನ್ನು ಜೊತೆಗೂಡಿಸುವ ಕೆಲಸ ಆಗುತ್ತಿದೆ. ಇವರನ್ನೆಲ್ಲಾ ಸೇರಿಸಿಕೊಂಡು ಸಮಿತಿ ರಚಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಸುರೇಶ್ ಬೈಲು ತಿಳಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top