ವಿಟ್ಲ: ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ಯತ್ನಿಸಿದ ಘಟನೆ ಕುಳ ಗ್ರಾಮದ ನೀರಪಳಿಕೆಯಲ್ಲಿ ನಡೆದಿದೆ.
ನೀರಪಳಿಕೆ ಮಹಮ್ಮದ್ ಕುಂಞ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ಇರುವ ಸಂದರ್ಭ ಮನೆಯ ಮುಖ್ಯ ದ್ವಾರದ ಮೂಲಕ ವ್ಯಕ್ತಿಯೋರ್ವ ಮುಖಕ್ಕೆ ಮಾಸ್ಕ್ ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಯ ಹತ್ತಿರ ಚಾಕುವಿನೊಂದಿಗೆ ಬಂದು, ಕಿವಿಯಲ್ಲಿ ಇರುವ ಚಿನ್ನ ಕೊಡುವಂತೆ ಕೇಳಿದ್ದಾನೆ. ಬೆದರಿದ ಮಹಿಳೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಆತ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾದ್ದಾನೆ ಎಂದು ತಿಳಿದು ಬಂದಿದೆ.
ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ತುರ್ತು ಕಾರ್ಯಪಡೆಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದರು. ವಿಟ್ಲ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.