ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ಏಕಕಾಲದಲ್ಲಿ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನ ಜ.1 ರಿಂದ 15 ರ ತನಕ ನಡೆಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಚಾಲಕ ಡಾ.ಕೃಷ್ಣ ಪ್ರಸನ್ನ ತಿಳಿಸಿದ್ದಾರೆ.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ಯಶಸ್ಸಿಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು. ಅಯೋಧ್ಯೆಯಿಂದ ಅಕ್ಷತೆ ನ.27 ರಂದು ನಮ್ಮ ಜಿಲ್ಲೆಗೆ ಆಗಮಿಸಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಗೆ ವಿದ್ಯುಕ್ತವಾಗಿ ಸ್ವಾಗತಿಸಿ ಬಳಿಕ ದೇವಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಅಕ್ಷತೆಯನ್ನು ಪಾವಿತ್ರ್ಯತೆಯೊಂದಿಗೆ ಜಿಲ್ಲೆಯ ಪ್ರತೀ ಹಿಂದೂ ಮನೆಗೂ ವಿತರಿಸುವ ಯೋಜನೆ ಮಾಡಲಾಗುವುದು. ಜ.1 ರಿಂದ 15 ರ ತನಕ ಮನೆ ಮನೆ ಸಂಪರ್ಕ ಅಭಿಯಾನದ ನಡುವೆ ಅಭಿಯಾನಕ್ಕೆ ವೇಗ ನೀಡುವ ನಿಟ್ಟಿನಲ್ಲಿ ಜ.7 ರಂದು ಮಹಾಸಂಪರ್ಕ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಶ್ರೀರಾಮನ ಪ್ರಾಣಪ್ರತಿಷ್ಠೆ ಸಂದರ್ಭ ಪ್ರತೀ ಹಿಂದೂ ಮನೆಯಲ್ಲಿ ಐದು ದೀಪಗಳನ್ನು ಹಚ್ಚುವ ಜತೆಗೆ ಪ್ರತೀ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ರಾಮ ತಾರಕ ಮಂತ್ರ ಜಪದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವರಾಜ ಪೆರಿಯತ್ತೋಡಿ, ಮೋಹನದಾಸ್ ಕಾಣಿಯೂರು, ಜನಾರ್ದನ ಬೆಟ್ಟ ಉಪಸ್ಥಿತರಿದ್ದರು.