ಬೆಂಗಳೂರು: ಮಂಗಳೂರಿನ ಸುರತ್ಕಲಿನಲ್ಲಿ ಬೆಳೆದಿದ್ದ ಕ್ಯಾಪ್ಟನ್ ಪ್ರಾಂಜಲ್ ಅಮರರಾಗಿದ್ದಾರೆ. ಉಗ್ರರೊಂದಿಗೆ ನಡೆದ ಕಾಳಗದಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರ ಬೆಂಗಳೂರಿನ ಅವರ ನಿವಾಸಕ್ಕೆ ಶುಕ್ರವಾರ ರಾತ್ರಿ ತಲುಪಿದ್ದು, ಅಂತಿಮ ನಮನ ಸಲ್ಲಿಸಲಾಗುತ್ತಿದೆ.
29 ವರ್ಷದ ಪ್ರಾಂಜಲ್ ಅವರ ಅಂತ್ಯಕ್ರಿಯೆ ಇಂದು ಅಂದರೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ಅಂತ್ಯಕ್ರಿಯೆಯ ಮುನ್ನ ನಡೆಯುವ ವಿಧಿವಿಧಾನ ನಡೆದು ಬಳಿಕ ಮೆರವಣಿಗೆಯಲ್ಲಿ ವೀರ ಯೋಧನ ಪಾರ್ಥಿವ ಶರೀರವನ್ನು 23 ಕಿಲೋ ಮೀಟರ್ ದೂರದಲ್ಲಿರುವ ಸೋಮಸುಂದರ ಪಾಳ್ಯದ ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿದುಬಂದಿದೆ.
ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಶುಕ್ರವಾರ ರಾತ್ರಿ ಭಾರತೀಯ ವಾಯುಪಡೆಯ ವಿಮಾನದಲ್ಲಿ ತರಲಾದ ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜ ಹೊದಿಸಿ ಹೊರಗೆ ತರಲಾಯಿತು. ಆ ಬಳಿಕ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರಕ್ಕೆ ಅವರ ತಂದೆ-ತಾಯಿ ಮೊದಲಿಗೆ ಪುಷ್ಪಗುಚ್ಛ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ , ಕೆ.ಜೆ ಜಾರ್ಜ್, ಬಿ ವೈ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಅಂತಿಮ ನಮನ ಸಲ್ಲಿಸಿದರು.