ಮೂರು ಇಲಾಖೆಗಳ ವಿಲೀನ, 2000 ಉದ್ಯೋಗ ನಷ್ಟ!

ಬೆಂಗಳೂರು : ವಿವಿಧ ಇಲಾಖೆಗಳನ್ನು ವಿಲೀನಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಹಳೆಯ ಪ್ರಸ್ತಾವನೆಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಉಪ ಸಮಿತಿ ಸಭೆಯು ಚರ್ಚೆ ನಡೆಸಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಕೃಷಿ ಇಲಾಖೆಯಲ್ಲಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಕುರಿತು ನವೆಂಬರ್‌ 8ರಂದು ಹೊರಡಿಸಲಾಗಿರುವ ಅರೆ ಸರ್ಕಾರಿ ಪತ್ರದಲ್ಲಿ ಈ ಕುರಿತು ಕೂಡಲೇ ಅಭಿಪ್ರಾಯ ಸಲ್ಲಿಸುವಂತೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಸೂಚಿಸಲಾಗಿದೆ. ಈಗಾಗಲೇ ರೇಷ್ಮೆ ಇಲಾಖೆಯು ತನ್ನ ಅಭಿಪ್ರಾಯವನ್ನು ಸಲ್ಲಿಸಿದ್ದು, ತೋಟಗಾರಿಕೆ ಇಲಾಖೆಯೂ ತನ್ನ ಅಭಿಪ್ರಾಯವನ್ನು ಸದ್ಯವೇ ದಾಖಲಿಸಿದೆ. ಎರಡೂ ಇಲಾಖೆಗಳ ಅಭಿಪ್ರಾಯದ ಕುರಿತು ಸಚಿವ ಸಂಪುಟ ಉಪ ಸಮಿತಿಯು ಚರ್ಚಿಸಿ ತೀರ್ಮಾನಿಸಲಿದೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಇತ್ತೀಚಿನವರೆಗೂ ಈ ಮೂರು ಇಲಾಖೆಗಳನ್ನು ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳುತ್ತಲೇ ಬಂದಿದ್ದರು. ಆದರೆ ಈಗ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ʻʻದುಂದುವೆಚ್ಚಕ್ಕೆ ಕಡಿವಾಣ, ಅನಗತ್ಯ ಹುದ್ದೆಗಳ ವಿಸರ್ಜನೆ ಮತ್ತು ನಿಷ್ಕ್ರೀಯ ಇಲಾಖೆಗಳ ವಿಲೀನಗೊಳಿಸಿ ಬೊಕ್ಕಸಕ್ಕಾಗುವ ನಷ್ಟ ನಿಯಂತ್ರಿಸಲು ಸರ್ಕಾರ ಮುಂದಾಗಿದೆʼʼ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆಯೂ ತೀರ್ಮಾನವಾಗಿತ್ತು!
ಕಳೆದ ಸರ್ಕಾರ ಕೂಡ ಈ ಕುರಿತು ಚರ್ಚೆ ನಡೆಸಿತ್ತು. ಆಗಿನ ಕಂದಾಯ ಸಚಿವರಾಗಿದ್ದ ಆರ್.‌ ಅಶೋಕ್‌ ಅವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಕೂಡ ಈ ಮೂರು ಇಲಾಖೆಯನ್ನು ವಿಲೀನಗೊಳಿಸಲು ಶಿಫಾರಸು ಮಾಡಿತ್ತು. ಈ ಸಂಬಂಧ 2022ರ ಅಕ್ಟೋಬರ್‌ನಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಆರ್‌. ಅಶೋಕ್‌, ‘‘ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡಿದ್ದು, ಮೂರನ್ನೂ ಒಂದೇ ಸಚಿವಾಲಯದಡಿ ತರುವ ಚಿಂತನೆ ಇದೆ. ಮೂರು ಇಲಾಖೆಗಳಿಂದ ಒಟ್ಟು 2000ಕ್ಕೂ ಹೆಚ್ಚು ಹುದ್ದೆ ರದ್ದುಪಡಿಸಲು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ’’ ಎಂದು ಹೇಳಿದ್ದರು.



































 
 

‘‘ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲೂ ರೇಷ್ಮೆ ಇಲಾಖೆಯ ಅಧಿಕಾರಿಗಳಿದ್ದಾರೆ. ಹಾಗಾಗಿ ರೇಷ್ಮೆ ಬೆಳೆಗಾರರಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಹುದ್ದೆಗಳನ್ನು ರದ್ದುಪಡಿಸುವ ಇಲ್ಲವೇ ವಿಲೀನಗೊಳಿಸುವುದು ಸೂಕ್ತ’’ ಎಂದು ಅವರು ವಿವರಿಸಿದ್ದರು. ಸಚಿವ ಸಂಪುಟ ಉಪ ಸಮಿತಿಯು ಈ ಕುರಿತು ತೀರ್ಮಾನಿಸಿದ್ದರೂ, ಈ ಪ್ರಸ್ತಾಪ ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದಿರಲಿಲ್ಲ.
ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಕುರಿತು 2014 ರಿಂದಲೂ ಚರ್ಚೆ ನಡೆಯುತ್ತಲೇ ಬಂದಿದೆ. 2014ರಲ್ಲಿಯೇ ಈ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಕುರಿತು ನಿರ್ಧರಿಸಲು ರಾಜ್ಯ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವಿಲೀನಕ್ಕೆ ಹಸಿರು ನಿಶಾನೆ ತೋರಿತ್ತು. ಆದರೆ ಈ ವಿಲೀನವನ್ನು ರೇಷ್ಮೆ ಬೆಳೆಗಾರರು ವಿರೋಧಿಸುತ್ತಲೇ ಬಂದಿದ್ದಾರೆ.

ದೇಶದಲ್ಲೇ ರೇಷ್ಮೆ ಬೆಳೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ರೇಷ್ಮೆಗೆ ಸಂಬಂಧಿಸಿದ ಹಲವು ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿವೆ. ಇಂತಹ ಲಾಭದಾಯಕ ಬೆಳೆಗೆ ಪ್ರತ್ಯೇಕ ಇಲಾಖೆ ಇದ್ದರೆ ರೈತರಿಗೆ ಸಾಕಷ್ಟು ನೆರವಾಗುತ್ತದೆ. ಕೃಷಿ ಇಲಾಖೆ ಬಹಳ ವಿಸ್ತಾರವಾಗಿದ್ದು, ಈಗಾಗಲೇ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಅದರೊಂದಿಗೆ ವಿಲೀನ ಮಾಡುವ ಪ್ರಕ್ರಿಯೆ ಸರಿಯಲ್ಲ ಎಂದು ರೇಷ್ಮೆ ಬೆಳೆಗಾರರು ಹೇಳುತ್ತಿದ್ದಾರೆ.

ತೋಟಗಾರಿಕಾ ಇಲಖೆಯನ್ನೂ ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತು ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡ ಚಿಂತನೆ ನಡೆಸಿತ್ತು. ಆಗಿನ ತೋಟಗಾರಿಕಾ ಸಚಿವರಾಗಿದ್ದ ಎಂ.ಸಿ.ಮನಗೂಳಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಪ್ರಕ್ರಿಯೆ ಅರ್ಧಕ್ಕೇ ನಿಂತಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top