ಬೆಂಗಳೂರು: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಸೋಮಸುಂದರಪಾಳ್ಯ ಚಿತಾಗಾರದಲ್ಲಿ ನಡೆಯಿತು.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು.
ಕಲ್ಲುಬಾಳು ರಸ್ತೆ ಮೂಲಕ ಜಿಗಣಿಯ ಒಡಿಸಿ ಸರ್ಕಲ್, ಜಿಗಣಿ ರಸ್ತೆ ಮೂಲಕ ಹರಪನ್ನಹಳ್ಳಿ – ಕೊಪ್ಪ ಗೇಟ್ – ಬೇಗಿಹಳ್ಳಿ – ಬನ್ನೇರುಘಟ್ಟ ರಸ್ತೆ – ನೈಸ್ ರೋಡ್ – ಕೂಡ್ಲುಗೇಟ್ ಮೂಲಕ ಸುಮಾರು 23 ಕಿಲೋ ಮೀಟರ್ ಹಾದು ಬಂದ ಮೆರವಣಿಗೆ ಸೋಮಸುಂದರಪಾಳ್ಯ ಚಿತಾಗಾರದ ಆವರಣದಲ್ಲಿ ಕೊನೆಗೊಂಡಿತು.