ಪುತ್ತೂರು: ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮೊಳಗಿನ ಶಕ್ತಿಯ ಅರಿವುಂಟಾಗುತ್ತದೆ. ಇದು ಹೊಸ ಅನುಭವಗಳನ್ನು ತೆರೆದಿಡಲು ಸಹಾಯವಾಗುತ್ತದೆ. ಮುಂದಿನ ತಲೆಮಾರಿಗೆ ನಮ್ಮೊಳಗಿನ ಜ್ಞಾನವನ್ನು ಹಂಚಬೇಕು. ಕಾಲಕ್ಕೆ ತಕ್ಕುದಾದ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂಬುದನ್ನು ನಿರ್ಧರಿಸುವುದು ಉತ್ತಮ ಎಂದು ಪುತ್ತೂರು ಪಿಡಬ್ಲ್ಯುಡಿ ಇಂಜಿನಿಯರ್ ಕನಿಷ್ಕ ಎಸ್ ಚಂದ್ರ ಹೇಳಿದರು.
ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪ್ರತಿಭಾ ಶೋಭನಮ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣಕುಮಾರ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಇರಬೇಕು. ಗುರಿ ತಲುಪುವ ಹಾದಿಯಲ್ಲಿ ಪರಿಶ್ರಮ ಎನ್ನುವಂತದ್ದು ಪ್ರಮುಖ ಪಾತ್ರ ವಹಿಸುತ್ತದೆ. ಪರಿಶ್ರಮವಿದ್ದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಸಹಕರಿಸಿದ ಪೋಷಕರು, ಶಿಕ್ಷಕರು ಹಾಗೂ ನಮ್ಮ ದೇಶದ ಋಣ ಎಂದೂ ಮರೆಯುವಂತಿಲ್ಲ ಎಂದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಗೋಪಾಲಕೃಷ್ಣ ಭಟ್, ಸದಸ್ಯರಾದ ವತ್ಸಲಾ ರಾಜ್ಞಿ ಎಂ, ಡಾ. ಕೃಷ್ಣಪ್ರಸನ್ನ ಕೆ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಸಿ ಎಚ್, ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು.
ಉಪನ್ಯಾಸಕಿ ಭಾಗ್ಯಶ್ರೀ ಸ್ವಾಗತಿಸಿ, ಶ್ರುತಿ ಎ. ವಂದಿಸಿದರು. ಉಪನ್ಯಾಸಕಿ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.