ಕೆದಿಲ: ಪ್ರಾಥಮಿಕ ಶಾಲಾ ಮಕ್ಕಳ ಕೈಯಲ್ಲಿ ಕೊಡಲಿ ರೂಪದ ಪೆನ್ಸಿಲ್ ಪತ್ತೆಯಾಗಿದ್ದು, ಮಾರಾಟ ಮಾಡುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೋಷಕರು ಒತ್ತಾಯ ಮಾಡಿದ ಘಟನೆ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ನಡೆದಿದೆ.
ಗಡಿಯಾರ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಕೈಯಲ್ಲಿ ಈ ಪೆನ್ಸಿಲ್ ಕಂಡು ಬಂದಿದ್ದು, ಪೋಷಕರು ಈ ಪೆನ್ಸಿಲ್ ನ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಈ ಮಾರಾಟಗಾರರು ಮಕ್ಕಳಿಗೆ ಬೇಕಾಗುವ ಪೆನ್ಸಿಲ್ ನ ಆರ್ಡರ್ ಪಡೆದುಕೊಂಡು ಹೋಗುತ್ತಾರೆ. ಅದರ ಬೆಲೆಯನ್ನು ತಿಳಿಸುತ್ತಾರೆ. ಎರಡು ದಿನಗಳ ಬಳಿಕ ಬಂದು ಪೆನ್ಸಿಲ್ ನೀಡುತ್ತಾರೆ. ರೂ. 20 ಮುಖಬೆಲೆಯ ಈ ಪೆನ್ಸಿಲ್ ನೋಡಲು ಬಲು ಸುಂದರವಾಗಿದೆಯಾದರೂ, ಅದರ ಒಂದು ಭಾಗ ಕೊಡಲಿಯನ್ನು ಹೋಲುವಂತಿದ್ದು, ಮಕ್ಕಳ ಕೈಗೆ ಅಥವಾ ಇತರರಿಗೆ ಗಾಯವಾಗುವ ಅವಕಾಶಗಳೇ ಹೆಚ್ಚು ಇದೆ ಎಂದು ಪೋಷಕರು ತಿಳಿಸಿದ್ದಾರೆ.
ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಇಂತಹ ವಸ್ತುಗಳ ಮಾರಾಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಬಾರದು ಎಂದು ಪೋಷಕರು ಆಗ್ರಹಿಸಿದ್ದಾರೆ.
ಸಣ್ಣ ಮಕ್ಕಳ ಕೈಗೆ ಕೊಡಲಿ ರೂಪದ ಪೆನ್ಸಿಲ್ ನೀಡಿದರೆ ಅವರ ಭಾವನೆಗಳ ಮೇಲೆ ಪ್ರಭಾವ ಬೀರುವ ಬಗ್ಗೆ ತಿಳಿಯದ ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಾರಾಟಗಾರರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಇದೇ ರೀತಿಯ ಪೆನ್ಸಿಲ್ ಗಳನ್ನು ಮಾರಾಟ ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.