ನವದೆಹಲಿ: ತಾಲಿಬಾನ್ ಆಡಳಿತವಿರುವ ಅಫಘಾನಿಸ್ತಾನವು ಭಾರತದಲ್ಲಿರುವ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಸೆಪ್ಟೆಂಬರ್ 30ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ರಾಯಭಾರ ಕಚೇರಿಯನ್ನು ಈಗ ಶಾಶ್ವತವಾಗಿ ಸ್ಥಗಿತಗೊಳಿಸಿದೆ.
ಈ ನಡುವೆ ತಾಲಿಬಾನ್ ನೀಡಿರುವ ಆರೋಪಗಳು, ಅದರ ದ್ವಂದ್ವ ನಿಲುವನ್ನು ಸೂಚಿಸುವಂತಿದೆ. ಮೊದಲು “ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಅಲ್ಲದೇ, ರಾಯಭಾರ ಕಚೇರಿ ನಿರ್ವಹಣೆಗೆ ಸಾಕಷ್ಟು ದುಡ್ಡಿಲ್ಲ” ಎಂದು ಹೇಳಿತ್ತು. ಆದರೆ ಈಗ “ಭಾರತ ಸರ್ಕಾರದಿಂದ ಎದುರಾಗುತ್ತಿರುವ ಸವಾಲುಗಳಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ” ಎಂದು ಆರೋಪಿಸಿದೆ. ಇದು ಈಗ ಚರ್ಚೆಗೆ ಕಾರಣವಾಗಿದೆ. ಅಫಘಾನಿಸ್ತಾನವು ಏಕಾಏಕಿ ರಾಯಭಾರ ಕಚೇರಿಯನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೂಲಗಳ ಪ್ರಕಾರ, ಅಶ್ರಫ್ ಘನಿ ಅವರು ಅಧ್ಯಕ್ಷರಾಗಿದ್ದಾಗ (ತಾಲಿಬಾನ್ ಆಡಳಿತಕ್ಕೂ ಮೊದಲು) ನೇಮಿಸಿದ ರಾಯಭಾರಿಗಳಿಗೂ, ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ನೇಮಿಸಲಾದ ಸಿಬ್ಬಂದಿಗೂ ಆಗಿಬರುತ್ತಿಲ್ಲ. ಎರಡೂ ತಂಡಗಳ ಮಧ್ಯೆ ಆಂತರಿಕ ಬಿಕ್ಕಟ್ಟು ಉಂಟಾಗಿದೆ. ಹಣದ ಕೊರತೆಯೂ ಉಂಟಾಗಿದೆ. ಹಾಗಾಗಿ, ಕಚೇರಿಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.