ಮಂಗಳೂರು: ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸೇನೆಯ ಇಬ್ಬರು ಕ್ಯಾಪ್ಟನ್‌ಗಳು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮೇಜರ್ ಮತ್ತು ಯೋಧ ಗಾಯಗೊಂಡಿದ್ದು, ಅವರನ್ನು ಉಧಂಪುರದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಓರ್ವರಾದ ಕ್ಯಾ. ಎಂ.ವಿ. ಪ್ರಾಂಜಲ್ (29) ಅವರು ಎಂ.ಆರ್.ಪಿ.ಎಲ್.ನ ನಿವೃತ್ತ ಎಂ.ಡಿ. ಎಂ. ವೆಂಕಟೇಶ್ ಅವರ ಏಕೈಕ ಪುತ್ರ.
ಪ್ರಾಂಜಲ್ ಎಂ.ವಿ. ಅವರು ಎಸೆಸೆಲ್ಸಿವರೆಗೆ ಎಂಆರ್‌ಪಿಎಲ್ ಸಮೀಪವೇ ಇರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಕಲಿತು ಕರ್ತವ್ಯದಲ್ಲಿ ಇರುವಾಗಲೇ ಎಂಜಿನಿಯರಿಂಗ್ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿದರು.
ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಯ ಪದೋನ್ನತಿಗೆ ಕಾಯುತ್ತಿರುವಾಗಲೇ ಅವರ ಬಲಿದಾನದ ಸಿಡಿಲಾಘಾತ ಕುಟುಂಬಕ್ಕೆ ಎದುರಾಗಿದೆ. ಕ್ಯಾ| ಪ್ರಾಂಜಲ್ ಅವರ ಪತ್ನಿ ಅದಿತಿ ಅವರು ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ವೆಂಕಟೇಶ್ ಅವರು ಪ್ರಸ್ತುತ ಬೆಂಗಳೂರು ನಿವಾಸಿಯಾಗಿದ್ದಾರೆ. ಕ್ಯಾ| ಪ್ರಾಂಜಲ್ ಅವರ ಪಾರ್ಥಿವ ಶರೀರ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದು, ಬನ್ನೇರುಘಟ್ಟದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಇವರ ಜತೆಗೆ 9 ಪ್ಯಾರಾ ರೆಜಿಮೆಂಟ್‌ನ ಕ್ಯಾ| ಶುಭಂ ಮತ್ತು ಹವಾಲ್ದಾರ್ ಮಜೀದ್ ಕೂಡ ಹುತಾತ್ಮರಾಗಿದ್ದಾರೆ. ಇನ್ನೋರ್ವ ಹುತಾತ್ಮ, ಜೂನಿಯರ್ ಕಮಿಶನ್ ಆಫೀಸರ್‌ನ ಗುರುತು ಇನ್ನಷ್ಟೇ ಪತ್ತೆಯಾಗಬೇಕಾಗಿದೆ. 9 ಪ್ಯಾರಾ ರೆಜಿಮೆಂಟ್‌ನ ಮೇಜರ್ ಓರ್ವರು ಗಾಯ ಗೊಂಡಿದ್ದು, ಆಸ್ಪತ್ರೆಯಲ್ಲಿ ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.