ಕಡಬ: ಇಲ್ಲಿನ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸುವುದು ಖಚಿತವಾಗಿದೆ.

ಕಡಬ ಒಕ್ಕಲಿಗ ಗೌಡ ಸಂಘದ ನಿಯೋಗ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಡಿ. 26ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿನಂತಿಸಿಕೊಂಡರು. ಸಕಾರಾತ್ಮಕವಾಗಿ ಸ್ಪಂದಿಸಿರುವ ಡಿ.ಕೆ. ಶಿವಕುಮಾರ್ ಅವರು, ಆಮಂತ್ರಣದಲ್ಲಿ ತನ್ನ ಹೆಸರು ಹಾಕಲು ಒಪ್ಪಿಕೊಂಡಿದ್ದಾರೆ. ಈ ಸಂದರ್ಭ ನಿಯೋಗದ ಜೊತೆ ಸುದೀರ್ಘ ಮಾತುಕತೆ ನಡೆಸಿರುವ ಅವರು, ಸಂಘದ ಕಾರ್ಯಚಟುವಟಿಕೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು ಎಂದು ನಿಯೋಗದ ಪ್ರಮುಖರು ತಿಳಿಸಿದ್ದಾರೆ.

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಸ್ಪಂದನಾ ಸಹಕಾರಿ ಸಂಘದ ಮುಖ್ಯ ಪ್ರವರ್ತಕ ಕೇಶವ್ ಅಮೈ, ಮಂಗಳೂರು ತಾಲೂಕು ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರೂ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷರೂ ಆದ ಕಿರಣ್ ಬುಡ್ಲೆಗುತ್ತು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕೋಶಾಧಿಕಾರಿ ಶಿವರಾಮ್ ಗೌಡ ನಿನ್ನಿಕಲ್ಲು, ಮಂಗಳೂರು ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘ ಕಾರ್ಯದರ್ಶಿ ಕಿರಣ್ ಹೊಸಳಿಕೆ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಬೆಂಗಳೂರು ಸಮಿತಿ ಸಂಚಾಲಕ ರಂಜಿತ್ ಪದಕಂಡ ನಿಯೋಗದಲ್ಲಿದ್ದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ರಾಜಕೀಯ ಧುರೀಣ ಭರತ್ ಮುಂಡೋಡಿ ಉಪಸ್ಥಿತರಿದ್ದರು.