ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್

ಉಪ್ಪಿನಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲು ಕೋಣಗಳ ದಂಡೇ ಇಂದು ಬೆಂಗಳೂರಿಗೆ ತೆರಳಿತು.

ಕರಾವಳಿಯ ವಿವಿಧ ಕಡೆಗಳಿಂದ ಬಂದ ಕೋಣಗಳ ದಂಡು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬಂದು ಸೇರಿದವು. ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ನೂರಾರು ಕಂಬಳಾಭಿಮಾನಿಗಳ ಸಮ್ಮುಖದಲ್ಲಿ ಪ್ರೀತಿ- ಗೌರವಾದಾರಗಳ ಸ್ವಾಗತ ನೀಡಲಾಯಿತು. ಬಳಿಕ ಕಂಬಳ ಸಮಿತಿಯ ವತಿಯಿಂದ ಕೋಣಗಳ ಯಜಮಾನರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. ಕೊಂಬು- ಕಹಳೆಗಳ ಸಹಿತ ಮೆರವಣಿಗೆಯೊಂದಿಗೆ ಕೋಣಗಳನ್ನು ಬೆಂಗಳೂರಿಗೆ ಬೀಳ್ಕೊಡಲಾಯಿತು.

ಪಶು ಸಂಗೋಪನಾ ಇಲಾಖೆಯ ಪಶು ವೈದ್ಯಾಧಿಕಾರಿಗಳು ಕೋಣಗಳ ಸಾಗಾಟಕ್ಕೆ ಅನುಮತಿ ಪತ್ರ ನೀಡಿದರು. ಕಂಬಳ ಸಮಿತಿಯವರಿಂದ ಕೋಣಗಳ ನೋಂದಣಿ ಪ್ರಕ್ರಿಯೆ ನಡೆಯಿತು. ಇಲ್ಲಿ ಚಾ- ತಿಂಡಿಯ ವ್ಯವಸ್ಥೆಯಾದ ಬಳಿಕ ಕಾಲೇಜು ಮೈದಾನದಿಂದ ರಾಷ್ಟ್ರೀಯ ಹೆದ್ದಾರಿಯ ಬಳಿಯವರೆಗೆ ಕೊಂಬು- ಕಹಳೆ, ಬ್ಯಾಂಡ್- ವಾದ್ಯಗಳ ಮೆರವಣಿಗೆ ನಡೆದು ಆ ಬಳಿಕ ಪ್ರಚಾರ ವಾಹನ ಮುಂದಕ್ಕೆ ಸಾಗಿದರೆ, ಅದರ ಹಿಂದೆ ಲಾರಿ, ಮಿನಿ ಲಾರಿ, ಟೆಂಪೋಗಳಲ್ಲಿ ರಾಜ ವೈಭವದ ಗತ್ತಿನೊಂದಿಗೆ ಕಂಬಳ ಕೋಣಗಳು ಬೆಂಗಳೂರಿನತ್ತ ಸಾಗಿದವು.































 
 

ನ.25 ಹಾಗೂ ನ.26ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದ ‘ರಾಜ- ಮಹಾರಾಜ’ ಜೋಡುಕರೆಯಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಬೆಂಗಳೂರು ಕಂಬಳ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಸಂಚಾಲಕರಾದ ನಿರಂಜನ್ ರೈ ಮಠಂತಬೆಟ್ಟು, ಎಂ. ರಾಜೇಶ್ ಶೆಟ್ಟಿ ಎತ್ತೂರು, ರಾಜೇಶ್ ಶೆಟ್ಟಿ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಗೌರವಾಧ್ಯಕ್ಷ ಎನ್. ಉಮೇಶ ಶೆಣೈ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ದ.ಕ. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಕಾರ್ಯದರ್ಶಿ ಅಬ್ದುರಹ್ಮಾನ್ ಯುನಿಕ್, ಪುತ್ತೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾ‌ರ್, 34 ನೆಕ್ಕಿಲಾಡಿ ಕಾಂಗ್ರೆಸ್ ವಲಯಾಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಪ್ರಮುಖರಾದ ವಿಕ್ರಂ ಶೆಟ್ಟಿ ಅಂತರ, ಈಶ್ವರ ಭಟ್ ಪಂಜಿಗುಡ್ಡೆ, ಮುಹಮ್ಮದ್ ಬಡಗನ್ನೂರು, ಅಶೋಕ್ ಕುಮಾರ್ ರೈ ನೆಕ್ಕರೆ, ಯೋಗೀಶ್ ಸಾಮಾನಿ, ರಾಕೇಶ್ ರೈ ಕೆಮ್ಮಾರ, ದಿಲೀಪ್‌ ಶೆಟ್ಟಿ ಕರಾಯ, ಸುದೇಶ್‌ ಶೆಟ್ಟಿ, ರಾಧಾಕೃಷ್ಣ ನಾಕ್ ಉದಯಗಿರಿ, ಪ್ರವೀಣ್‌ಚಂದ್ರ ಆಳ್ವ, ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ನಾರಾಯಣ ಶೆಟ್ಟಿ ಹೊಳೆಕರೆ, ಸತೀಶ್‌ ಶೆಟ್ಟಿ ಹೆನ್ನಾಳ, ದೇವಿಪ್ರಸಾದ್‌ ಶೆಟ್ಟಿ ಬೆಳ್ಳಿಪ್ಪಾಡಿ, ಯು.ಟಿ. ತೌಸೀಫ್, ಶಬೀ‌ರ್ ಕೆಂಪಿ, ರಾಜೇಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಕಂಗೈ, ಯು. ರಾಮ, ರಾಜೇಶ್ ಶೆಟ್ಟಿ, ವೆಂಕಪ್ಪ ಗೌಡ ಮರುವೇಲು, ಫಾರೂಕ್ ಜಿಂದಗಿ ಮತ್ತಿತರರು ಉಪಸ್ಥಿತರಿದ್ದರು.

ಹಾಸನದಲ್ಲಿ ಕೋಣಗಳಿಗೆ ವಿಶ್ರಾಂತಿಯ ವ್ಯವಸ್ಥೆ:

ಉಪ್ಪಿನಂಗಡಿಯಿಂದ ಹೊರಟ ಕಂಬಳ ಕೋಣಗಳಿಗೆ ಹಾಸನದ ಸರಕಾರಿ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಏಕಕಾಲದಲ್ಲಿ 10 ವಾಹನಗಳಿಂದ ಕೋಣಗಳನ್ನು ಇಳಿಸಲು ರ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಕೋಣಗಳನ್ನು ವಾಹನಗಳಿಂದ ಇಳಿಸಿ ಅವುಗಳ ವಿಶ್ರಾಂತಿಗೆ ಸಮಯ ನೀಡಲಾಗುತ್ತದೆ. ಇಲ್ಲಿ ಕೋಣಗಳಿಗೆಂದು ಬೈಹುಲ್ಲು, ನೀರು, ಹುರುಳಿಯನ್ನು ದಾಸ್ತಾನು ಮಾಡಲಾಗಿದೆ. ಅಲ್ಲದೆ, ಪ್ರಯಾಣದುದ್ದಕ್ಕೂ ನೀರು ತುಂಬಿದ ಟ್ಯಾಂಕರ್‌ಗಳು ಇವುಗಳೊಂದಿಗೆ ಸಂಚರಿಸುತ್ತಿವೆ. ಇಲ್ಲಿ ಕೋಣಗಳೊಂದಿಗೆ ಬಂದವರಿಗೆ ಊಟದ ವ್ಯವಸ್ಥೆಯೂ ನಡೆಯಲಿದೆ. ಸಂಜೆ 6 ಗಂಟೆಗೆ ಹಾಸನದಿಂದ ಹೊರಡುವ ಕೋಣಗಳನ್ನು ಬಳಿಕ ನೆಲಮಂಗಲದಿಂದ ಸುಮಾರು 9 ಗಂಟೆಯ ಬಳಿಕ ಅಂದರೆ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾದ ಬಳಿಕ ಅರಮನೆ ಮೈದಾನಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ರಾತ್ರಿ 12 ಗಂಟೆಗೆ ಅರಮನೆ ಮೈದಾನಕ್ಕೆ ತಲುಪುವ ಕೋಣಗಳಿಗೆ ಬೇಕಾದ ವ್ಯವಸ್ಥೆಯನ್ನು ಕಂಬಳ ಸಮಿತಿ, ತುಳು ಕೂಟ, ಕನ್ನಡಪರ ಸಂಘಟನೆಗಳ ಸಹಕಾರದಲ್ಲಿ ಎಚ್.ಡಿ. ರೇವಣ್ಣ ಅವರು ವಹಿಸಿಕೊಂಡಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ತಿಳಿಸಿದ್ದಾರೆ.

ಶ್ರೀ ಮಹಿಷಮರ್ಧಿನಿ ಸನ್ನಿಧಿಯಲ್ಲಿ ಪ್ರಾರ್ಥನೆ :

ಮೊದಲಿಗೆ ಕೋಡಿಂಬಾಡಿಯ ಮಠಂತಬೆಟ್ಟುವಿನ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಕಂಬಳ ಸಮಿತಿಯವರು ಕೋಣಗಳ ಸುಖಕರ ಪ್ರಯಾಣಕ್ಕಾಗಿ ಹಾಗೂ ಬೆಂಗಳೂರಿನ ಕಂಬಳವು ಯಶಸ್ವಿಯಾಗುವಂತೆ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

170 ಜೊತೆ ಕೋಣಗಳು ನೋಂದಣಿ :

ಕಂಬಳಕ್ಕಾಗಿ ಈಗಾಗಲೇ 170 ಕೋಣಗಳ ನೋಂದಣಿಯಾಗಿದ್ದು, ಸುಮಾರು 150 ಜೋಡಿ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top