ರೌಡಿ ಶೀಟರ್ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಶಸ್ತಿಯನ್ನು ವಾಪಸ್ಸು ಪಡೆಯಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.
ಮೈಸೂರಿನ ಲಷ್ಕರ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಅಶೋಕ್ ಅವರು ಕಾಂಗ್ರೆಸ್ ಮುಖಂಡ ಎಂಬ ಕಾರಣಕ್ಕೆ ನವೆಂಬರ್ 1ರಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ನೀಡಿರುವ ಪ್ರಶಸ್ತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಹೇಳಿದ್ದಾರೆ.
ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಡಾ. ಕೆ.ಎಂ. ಅಶೋಕ್ ವಿರುದ್ಧ ರೌಡಿ ಶೀಟರ್ ಪಟ್ಟಿ ತೆರೆಯಲಾಗಿದೆ. ಆದರೆ, ಆತನಿಗೆ ಕನ್ನಡ ರಾಜ್ಯೋತ್ಸವ ದಿನದಂದು ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಆತನ ವಿರುದ್ಧ ರೌಡಿ ಶೀಟರ್ ಆರೋಪ ಇರುವ ಬಗ್ಗೆ ವರದಿಯಾದ ಬಳಿಕ, ಪ್ರಶಸ್ತಿಯನ್ನು ವಾಪಸ್ ಪಡೆಯುವುದಾಗಿ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಅಶೋಕ್ ಕಾಂಗ್ರೆಸ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಗ ಇತ್ತೀಚೆಗೆ ಪುಂಡಾಟ ತೋರಿಸಿದ್ದರು. ಆತನ ವರ್ತನೆಯಿಂದಾಗಿ ಅಶೋಕ್ ವಿರುದ್ಧ ರೌಡಿ ಶೀಟರ್ ಎಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿತ್ತು.