19 ವರ್ಷದ ಯುವಕನೋರ್ವನನ್ನು ನಾಲ್ವರ ತಂಡ ಹತ್ಯೆಗೈದ ಘಟನೆ ತಿರುವನಂತಪುರಂನ ಕರಿಮಾಡೋಮ್‌ನ ಟರ್ಫ್‌ನಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಅರ್ಷದ್ ಎಂದು ಗುರುತಿಸಲಾಗಿದೆ. ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಆರೋಪಿಗಳು ಅಪ್ರಾಪ್ತರು ಎಂದು ಹೇಳಲಾಗಿದೆ. ಹಿಂದಿನ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ಅರ್ಷದ್ ತನ್ನ ಸ್ನೇಹಿತರೊಂದಿಗೆ ಕಾಲೋನಿಯಲ್ಲಿ ಡ್ರಗ್ಸ್ ಜಾಲ ತಡೆಯುವ ತಡೆಯುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾದಕ ವ್ಯಸನದ ವಿರುದ್ಧ ಹೋರಾಡಲು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಅರ್ಷದ್ ಯುವ ಸಮೂಹವನ್ನು ರಚಿಸಿದ್ದರು. ಈ ಉಪಕ್ರಮವೇ ಅರ್ಷದ್ ಮೇಲಿನ ಹಿಂಸಾತ್ಮಕ ದಾಳಿಗೆ ಕಾರಣ ಎಂದೂ ವಿಶ್ಲೇಷಿಸಲಾಗಿದೆ.
ಅರ್ಷದ್ ಅವರ ಕುತ್ತಿಗೆಗೆ ತೀವ್ರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ ಅರ್ಷದ್ ಸಹೋದರನಿಗೂ ಗಾಯಗಳಾಗಿವೆ. ಈ ಹಿಂದೆ ದೀಪಾವಳಿಯಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು ಎಂದು ಆತನ ಸ್ನೇಹಿತರು ಬಹಿರಂಗಪಡಿಸಿದ್ದಾರೆ.
ಅರ್ಷದ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆತನ ಸ್ನೇಹಿತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಅರ್ಷದ್ ಪ್ರತಿಭಾವಂತ ಫುಟ್ಬಾಲ್ ಆಟಗಾರನಾಗಿದ್ದ ಎಂದು ಸ್ನೇಹಿತರು ತಿಳಿಸಿದ್ದಾರೆ.