ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಟ್ರಕ್ಕೊಂದು ಢಿಕ್ಕಿ ಹೊಡೆದ ಪರಿಣಾಮ 8 ಮಕ್ಕಳು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಬುಧವಾರ (ನ. 22ರಂದು) ನಡೆದಿದೆ.
ಮುಂಜಾನೆ 7:35ರ ಸಮಯಕ್ಕೆ ಮಕ್ಕಳು ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ವಿಶಾಖಪಟ್ಟಣಂನ ಸಂಗಮ್ ಶರತ್ ಥಿಯೇಟರಿನ ಅಂಡರ್ ಪಾಸ್ ರಸ್ತೆಯಿಂದ ನುಗ್ಗಿದ ಆಟೋ ಹೆದ್ದಾರಿಯಲ್ಲಿ ಬರುತ್ತಿದ್ದ ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ರಸ್ತೆ ದಾಟಲು ವೇಗವಾಗಿ ಹೋಗುತ್ತಿದ್ದ ರಿಕ್ಷಾ, ಟ್ರಕ್ಕಿಗೆ ಢಿಕ್ಕಿ ಹೊಡೆದಿದೆ. ಕ್ಷಣ ಮಾತ್ರದಲ್ಲಿ ಆಟೋ ಪಲ್ಟಿಯಾಗಿದ್ದು, ಅದರಲ್ಲಿದ್ದ 8 ಮಕ್ಕಳು ಗಾಳಿಗೆ ಹಾರಿ ಕೆಳಗೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಪಘಾತದ ಬಳಿಕ ವಾಹನ ಸವಾರರು ಹಾಗೂ ಸ್ಥಳೀಯರು ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದಾರೆ. ಪಲ್ಟಿಯಾಗಿದ್ದ ಆಟೋವನ್ನು ಎತ್ತಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಸಿದ್ದಾರೆ. ಸದ್ಯ 8 ಮಕ್ಕಳಲ್ಲಿ ನಾಲ್ವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದ ನಾಲ್ವರಲ್ಲಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ. ಆಟೋ ಓವರ್ ಲೋಡ್ ಆಗಿತ್ತು, ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ಆಟೋದಲ್ಲಿ ಕೂರಿಸಲಾಗಿತ್ತು. ಈ ಕಾರಣದಿಂದಾಗಿ ಟ್ರಕ್ ಹಾಗೂ ಆಟೋ ಚಾಲಕ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿರುವುದಾಗಿ ವರದಿ ತಿಳಿಸಿದೆ.