ಪುತ್ತೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ‘ಕಲಾ ಸಂಗಮ-2023’ ಕೆಪಿಎಸ್ ಕೆಯ್ಯೂರಿನಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿ, ಸರಕಾರಿ ಶಾಲೆಗಳನ್ನು ಉಳಿಸಬೇಕಾದರೆ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು. ಆದರೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಶಿಕ್ಷಕರ ಕೊರತೆಯ ಕಾರಣಕ್ಕೆ ಹಲವು ಮಂದಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದೆ. ಮಕ್ಕಳ ಕೊರತೆ ಇರುವ ಶಾಲೆಗಳನ್ನು ಆಯಾ ಗ್ರಾಮದ ಮುಖ್ಯ ಶಾಲೆಗೆ ಸಮೀಕರಣ ಮಾಡಲಾಗುವುದು ಎಂದು ಹೇಳಿದರು.
ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಕೆ.ಶರತ್ ಕುಮಾರ್ ಕಾರ್ಯಕ್ರಮದಲ್ಲಿ ಪ್ರತಿಭಾ ಧ್ವಜಾರೋಹಣ ಮಾಡಿ, ಅದ್ಯಕ್ಷತೆ ವಹಿಸಿ, ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಪ್ರತಿಭೆಗಳನ್ನು ಗುರುತಿಸಿದಲ್ಲಿ ಸಮಾಜದಲ್ಲಿ ವಿಧ್ಯಾರ್ಥಿಗಳು ಪ್ರತಿಭಾವಂತರಾಗಿ ಮುಂದೆ ಬರಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಬಸ್ಸಿನ ಕೊರತೆ ಇತ್ತು. ಅದಕ್ಕಾಗಿ ಈಗಾಗಲೇ 8 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರಕಾರ ವ್ಯವಸ್ಥೆ ಮಾಡಲಿದ್ದು, ಪ್ರತೀಯೊಂದು ಮಗು ಶಿಕ್ಷಣ ಪಡೆಯುವಂತಾಗಬೇಕು ಎಂದು ಶಾಸಕರು ಹೇಳಿದರು.
ಕೆಪಿಎಸ್ ಕೆಯ್ಯೂರಿನಲ್ಲಿ 13 ವರ್ಷಗಳ ಕಾಲ ಚಿತ್ರಕಲಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಎಲ್.ಎಚ್. ಗೌಂಡಿ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸದಾಶಿವ ರೈ ದಂಬೆಕಾನ, ಪುತ್ತೂರು ಕ್ಷೇತ್ರ ಶಿಕ್ಷಾಣಾಧಿಕಾರಿ ಲೋಕೇಶ್ ಎಸ್.ಆರ್., ಕೆಪಿಎಸ್ ಕೆಯ್ಯೂರು ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ ಕೆಯ್ಯೂರು, ಕಲಾಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ, ಕೆಪಿಎಸ್ ಕೆಯ್ಯೂರು ಎಸ್ ಡಿ ಎಂ ಸಿ ಉಪಾದ್ಯಕ್ಷ ಚರಣ್ ಕುಮಾರ್ ಸಣಂಗಳ, ಬಿ.ಆರ್.ಸಿ ಸಮನ್ವಯಾಧಿಕಾರಿ ನವೀನ್ ಸ್ಟೀಪನ್ ವೇಗಸ್, ಕೆಪಿಎಸ್ ಪ್ರಾಥಮಿಕ ವಿಭಾಗ ಮುಖ್ಯಗುರು ಬಾಬು ಎಂ., ಪ್ರಾಂಶುಪಾಲ ಇಸ್ಮಾಯಿಲ್ ಪಿ. ಮತ್ತಿತರರು ಉಪಸ್ಥಿತರಿದ್ದರು. ಕೆಪಿಎಸ್ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಪಿಎಸ್ ಕೆಯ್ಯೂರು ಕಾರ್ಯಾದ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು ಸ್ವಾಗತಿಸಿ, ಜೆಸ್ಸಿ ಪಿ.ವಿ, ನಳಿನಿ ಡಿ, ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು.