ಸುಬ್ರಹ್ಮಣ್ಯ: ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಬ್ರಹ್ಮಣ್ಯ ಶಾಖೆಯ ಕಲಾತಂಡದಿಂದ ನೃತ್ಯೋಹಂ ಭರತನಾಟ್ಯ ಶನಿವಾರ ಕುಕ್ಕೆ ಸುಬ್ರಹ್ಮಣ್ಯ ವನದುರ್ಗಾದೇವಿ ಸಭಾಂಗಣದಲ್ಲಿ ನಡೆಯಿತು.
ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಮಠದ ಸುದರ್ಶನ ಜೋಯಿಸರು, ಸನಾತನ ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಸ್ತ್ರೀಯ ಕಾರ್ಯಕ್ರಮಗಳು ಅನಿವಾರ್ಯ. ಪ್ರಸ್ತುತ ಪಾಶ್ಚಾತ್ಯ ನೃತ್ಯ ಹಾಗೂ ಸೀರಿಯಲ್’ಗಳ ಭರಾಟೆಯ ನಡುವೆ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು ಎಂದು ಆಶಿಸಿದರು.





ಇದೇ ಸಂದರ್ಭ ಕಲಾ ಕೇಂದ್ರದ ವತಿಯಿಂದ ಚೈತನ್ಯ ಹಾಗೂ ಮೇಘನಾ ಎಂಬ ವಿದ್ಯಾರ್ಥಿಗಳನ್ನು ನೃತ್ಯ ಪೋಷಣ ಕಾರ್ಯಕ್ರಮದಲ್ಲಿ ಉಚಿತ ಶಿಕ್ಷಣಕ್ಕೆ ದತ್ತು ಪಡೆಯಲಾಯಿತು.
ಭರತನಾಟ್ಯ ಜೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೆರವೇರಿಸಲಾಯಿತು.
ನೃತ್ಯೋಹಂ ಅಂಗವಾಗಿ ಸುಬ್ರಹ್ಮಣ್ಯ ಕಲಾ ತಂಡದ ವಿದ್ಯಾರ್ಥಿಗಳು ನೃತ್ಯ ಕೇಂದ್ರದ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ಭರತನಾಟ್ಯ ಸಮೂಹ ನೃತ್ಯ ಪ್ರದರ್ಶಿಸಿದರು.
ನಟುವಾಂಗದಲ್ಲಿ ವಿದುಷಿ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ ವಿದ್ವಾನ್ ಗೀತೇಶ್ ನೀಲೇಶ್ವರ ಹಾಗೂ ವಯಲಿನ್’ನಲ್ಲಿ ವಿದ್ವಾನ್ ಬಾಲರಾಜ್ ಕಾಸರಗೋಡು ಸಹಕರಿಸಿದರು. ಕಲಾ ಕೇಂದ್ರದ ಟ್ರಸ್ಟಿ ಆತ್ಮಭೂಷಣ್ ಸಹಕರಿಸಿದರು. ಶಿಕ್ಷಕ ಶಶಿಕಾಂತ್ ಕಾರ್ಯಕ್ರಮ ನಿರೂಪಿಸಿದರು.