ಪುತ್ತೂರು: ಬಿಜೆಪಿ ಸರಕಾರವಿದ್ದಾಗ ಹಿಂದೂ ಕಾರ್ಯಕರ್ತರ ಮೇಲೆ ಹಾಕಿದ್ದ ಪ್ರಕರಣಗಳ ಆಧಾರದಲ್ಲಿ ಗಡಿಪಾರು ಆದೇಶ ಮಾಡಲಾಗಿದೆ ಎಂಬ ಶಾಸಕ ಅಶೋಕ್ ಕುಮಾರ್ ರೈ ಅವರ ಹೇಳಿಕೆಗೆ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿರುಗೇಟು ನೀಡಿದ್ದಾರೆ.
ಉದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ವ್ಯಕ್ತಿಗಳು ಇಂದು ಬಿಜೆಪಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ಅಂತಹವರಿಂದ ಬಿಜೆಪಿಗೆ ಬುದ್ಧಿವಾದ ಬೇಕಿಲ್ಲ. ಮೊದಲು ಅಂತಹ ವ್ಯಕ್ತಿಗಳನ್ನೇ ಗಡಿಪಾರು ಮಾಡಬೇಕು ಎಂದು ಸಾಜ ರಾಧಾಕೃಷ್ಣ ಆಳ್ವ ಆಗ್ರಹಿಸಿದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಮಾರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳ ಬಗ್ಗೆ ಗೌರವವಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಹೇಳಿಕೆಗಳನ್ನು ನೀಡುವಾಗ, ತಿಳಿದುಕೊಂಡು ಮಾಹಿತಿಪೂರ್ಣ ಹೇಳಿಕೆ ನೀಡಬೇಕು. ಚುನಾವಣಾ ನೀತಿ ಸಂಹಿತೆಯ ಸಂದರ್ಭ ಪ್ರಕರಣ ದಾಖಲಾಗಿರುವುದು. ಯಾರನ್ನೋ ಮೆಚ್ಚಿಸಲು ಹೇಳಿಕೆಗಳನ್ನು ನೀಡಬಾರದು. ಜವಾಬ್ದಾರಿಯುತ ಹುದ್ದೆಯಲ್ಲಿರುವ ಜನಪ್ರತಿನಿಧಿಗಳು ಜನರನ್ನು ತಪ್ಪು ದಾರಿಗೆ ಎಳೆಯುವುದು ಬೇಡ ಎಂದು ಕುಟುಕಿದರು.
ಹಿಂದೂ ಸಮಾಜ ತೊಂದರೆಗೆ ಒಳಗಾದಾಗ, ಹಿಂದೂಗಳ ಮೇಲೆ ದಾಳಿ ನಡೆದಾಗ ರಕ್ಷಣೆಗೆ ನಿಲ್ಲುವುದು ಹಿಂದೂ ಪರ ಸಂಘಟನೆಗಳು ಕರ್ತವ್ಯ. ಅಂತಹ ಕೆಲಸವನ್ನು ಸಂಘಟನೆಗಳು ಮಾಡಿವೆ. ಹೀಗೆ ಸಮಾಜ ಪರ ಕೆಲಸ ಮಾಡುವ ಸಂಘಟನೆಯ ಕಾರ್ಯಕರ್ತರನ್ನೇ ಗಡಿಪಾರು ಮಾಡಲು ಹೊರಟಿರುವ ಕ್ರಮ ಎಷ್ಟು ಸರಿ ಎಂದು ಸಾಜ ಪ್ರಶ್ನಿಸಿದರು.