ವಿಶ್ವಕಪ್ ನಲ್ಲಿ ಭಾರತಕ್ಕೆ ಸೋಲು: ರೋಹಿತ್ ಶರ್ಮ ಭಾವುಕ ಮಾತು

ನವದೆಹಲಿ: ನಿನ್ನೆ ನಡೆದ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸುವ ಮೂಲಕ ಅಸಂಖ್ಯಾತ ಭಾರತೀಯರ ಕನಸು ನುಚ್ಚು ನೂರಾಯಿತು. ಮಹತ್ವದ ಪಂದ್ಯದಲ್ಲಿ ಹೀನಾಯ ಸೋಲಿನ ಬಗ್ಗೆ ಮಾತನಾಡಿದ ರೋಹಿತ್ ಅವರು​, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಹಣಾಹಣಿಯಲ್ಲಿ ನಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್​ ಮಾಡಲಿಲ್ಲ ಎಂದು ಒಪ್ಪಿಕೊಂಡರು.

ನಾವು ಉತ್ತಮವಾಗಿ ಆಡಲಿಲ್ಲ:

ಪಂದ್ಯದ ಬಳಿಕ ನೋವಿನಿಂದಲೇ ಮಾತನಾಡಿದ ರೋಹಿತ್​, ಫೈನಲ್‌ಗೆ ಈ ಪಿಚ್​ ತುಂಬಾ ಕಷ್ಟಕರ ಆಗಿತ್ತು, ಬಹಳ ಶುಷ್ಕದಿಂದ ಕೂಡಿತ್ತು ಮತ್ತು ಟಾಸ್ ಗೆದ್ದ ಪ್ಯಾಟ್ ಕಮ್ಮಿನ್ಸ್ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಇದು ಭಾರತಕ್ಕೆ ಮೊದಲನೇ ಹಿನ್ನಡೆಯಾಯಿತು. ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ನಾವಿಂದು ಉತ್ತಮವಾಗಿ ಆಡಲಿಲ್ಲ. ನಾವು ಎಲ್ಲವನ್ನೂ ಪ್ರಯತ್ನಿಸಿದೆವು ಆದರೆ ಅದು ಕೈಗೂಡಲಿಲ್ಲ. 20 ರಿಂದ 30 ರನ್​ಗಳು ಹೆಚ್ಚು ಬಂದಿದ್ದರೆ, ಚೆನ್ನಾಗಿರುತ್ತಿತ್ತು. ಕೆ.ಎಲ್. ರಾಹುಲ್​ ಮತ್ತು ಕೊಹ್ಲಿ ಉತ್ತಮ ಜೊತೆಯಾಟವನ್ನು ಎದುರು ನೋಡುತ್ತಾ 270-280 ರನ್​ ಟಾರ್ಗೆಟ್​ ಬಗ್ಗೆ ಯೋಚನೆ ಮಾಡುತ್ತಿದ್ದೆವು. ಆದರೆ, ನಾವು ವಿಕೆಟ್ ಕಳೆದುಕೊಳ್ಳುತ್ತಲೇ ಇದ್ದೆವು ಎಂದು ರೋಹಿತ್ ಶರ್ಮ ಹೇಳಿದರು.































 
 

ಹೆಡ್ – ಲಬುಶೇನ್​ ನಿರ್ಣಾಯಕ ಆಟ:

ಹಗಲಿಗಿಂತ ರಾತ್ರಿ ಸಮಯದಲ್ಲಿ ಬ್ಯಾಟಿಂಗ್ ಮಾಡುವುದು ಸ್ವಲ್ಪ ಉತ್ತಮ ಎಂದು ನಮಗೆ ತಿಳಿದಿತ್ತು. ಆದರೆ, ಅದನ್ನು ಸಮರ್ಥಿಸುವುದನ್ನು ಬಯಸುವುದಿಲ್ಲ. ನಾವು ನಮ್ಮ ತಂಡದ ಪರ ಹೆಚ್ಚು ರನ್‌ ಗಳಿಸಲಿಲ್ಲ. ನೀವು ಸ್ಕೋರ್​ ಬೋರ್ಡ್‌ನಲ್ಲಿ 240 ರನ್‌ಗಳನ್ನು ಹೊಂದಿರುವಾಗ, ನೀವು ವಿಕೆಟ್‌ಗಳನ್ನು ಪಡೆಯಲು ಬಯಸುತ್ತೀರಿ. ಆದರೆ, ಹೆಡ್ ಮತ್ತು ಲಬುಶೇನ್​ ಅವರು ನಿರ್ಣಾಯಕ ಪಂದ್ಯದಲ್ಲಿ ದೊಡ್ಡ ಜೊತೆಯಾಟವನ್ನು ಆಡಿದರು ಮತ್ತು ನಮ್ಮನ್ನು ಸಂಪೂರ್ಣವಾಗಿ ಆಟದಿಂದಲೇ ಹೊರಹಾಕಿದರು. ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ ಎಂದು ರೋಹಿತ್​ ತಿಳಿಸಿದರು.

ಮುಂಚೂಣಿಯಲ್ಲಿರುವ ಭಾರತದ ವೇಗಿಗಳ ನೆರವಿನಿಂದ ನಾವು 3 ವಿಕೆಟ್‌ಗಳನ್ನು ತೆಗೆದುಕೊಂಡೆವು. ಆದರೆ, ನಮಗೆ ಮತ್ತೊಂದು ವಿಕೆಟ್​ ಅವಶ್ಯಕತೆ ಇತ್ತು. ಆದರೆ, ಹೆಡ್​ ಮತ್ತು ಲಬುಶೇನ್​ ಅದಕ್ಕೆ ಅವಕಾಶ ನೀಡಲಿಲ್ಲ. ಅವರಿಬ್ಬರ ಅದ್ಭುತ ಜೊತೆಯಾಟಕ್ಕೆ ತಂಡದ ಗೆಲುವಿನ ಕ್ರೆಡಿಟ್​ ನೀಡಬೇಕು ಎಂದರು.

ತಾಳ್ಮೆಯ ಆಟಕ್ಕೆ ಆಸೀಸ್’ಗೆ ಗೆಲುವು:

ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು.

ಆರನೇ ವಿಶ್ವಕಪ್​ ಗೆಲುವು
ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್​ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಂತಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top