ಪುತ್ತೂರಿಗೆ ಟೂರಿಸಂ ಮಾನ್ಯತೆಗೆ ಪ್ರಯತ್ನ | ನವೀಕೃತ ಶ್ರೀ ಮಹಾಲಿಂಗೇಶ್ವರ ಸಭಾಭವನ ಸಮರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ | ಗೋಲೋಕ ಉತ್ಸವ ಕುರಿತು ಯೋಜನೆ: ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಕರಾವಳಿ ಭಾಗ ಧಾರ್ಮಿಕತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಪುತ್ತೂರನ್ನು ಟೂರಿಸಂ ಪ್ರದೇಶ ಆಗುವ ನಿಟ್ಟಿನಲ್ಲಿ ಮಾನ್ಯತೆ ನೀಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಮಾಸ್ಟರ್ ಪ್ಲಾನ್ ಸಹಿತ ಮಾಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ನವೀಕೃತಗೊಂಡಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಸಭಾಭವನದ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಈಗಾಗಲೇ ಅಭಿವೃದ್ಧಿ ಕಾರ್ಯಕ್ರಮಗಳಲ್ಲೊಂದಾದ ಸಭಾಭವನ ಸಮರ್ಪಣೆ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಕೆರೆಯಲ್ಲಿ ಕಾರಂಜಿ, ಕೆರೆಯ ಬಳಿ ಇರುವ ಮಹಿಳಾ ಠಾಣೆ ಸ್ಥಳಾಂತರ, ತೋಡಿಗೆ ತಡೆಗೋಡೆ, ಕಂಬಳ ಗದ್ದೆ ಸ್ಥಳಾಂತರ ಹೀಗೆ ಹಲವು ಮಾಸ್ಟರ್ ಪ್ಲಾನ್ ತಯಾರಿಸಿ ಸರಕಾರಕ್ಕೆ ಕಳುಹಿಸುವ ಕೆಲಸ ಆಗಲಿದೆ ಎಂದು ತಿಳಿಸಿದರು.































 
 

ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಈಗಾಗಲೇ ವ್ಯವಸ್ಥಾಪನಾ ಅಧ್ಯಕ್ಷರು ಮನವಿ ಮಾಡಿದಂತೆ ಬಿಎಸ್‍ ಎನ್‍ಎಲ್  ರಸ್ತೆಯ ಕುರಿತು ಮಾಹಿತಿ ಇಲ್ಲ. ಮಾಹಿತಿ ಪಡಕೊಂಡು ಸೂಕ್ತ ಸಹಕಾರ ನೀಡುತ್ತೇನೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಈಗಾಗಲೇ ದೇವಸ್ಥಾನದ ಅಭಿವೃದ್ಧಿಯ ಕುರಿತ ಮಾಸ್ಟರ್ ಪ್ಲ್ಯಾನ್ ಮಾಡುವಲ್ಲಿ ಯಶಸ್ವಿಯಾಗಿದೆ. ಸಾರ್ವಜನಿಕ ಬಳಕೆಗೆ ಸಭಾಭವನ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಲಿ ಎಂದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ದೇವಸ್ಥಾನಕ್ಕೆ ಪ್ರವೇಶಿಸುವ ರಸ್ತೆ ಇಕ್ಕಟ್ಟಾಗಿದ್ದು, ಪಕ್ಕದಲ್ಲಿರುವ ಬಿಎಸ್‍ ಎನ್‍.ಎಲ್ ನವರಿಗೆ ಬಹಳ ವರ್ಷಗಳ ಹಿಂದೆ ಜಾಗ ಮಾರಾಟ ಮಾಡಲಾಗಿದೆ. ಅದನ್ನು ಪುನಃ ಪಡೆದುಕೊಳ್ಳುವ ಅವಕಾಶ ಇದೆ. ಈ ಕುರಿತು ಸಹಾಯಕ ಆಯುಕ್ತರಲ್ಲಿ ಪರಿಶೀಲಿಸುವಂತೆ ಮನವಿ ಮಾಡಿದರು. ಕುರಿಯದಲ್ಲಿ ದೇವಸ್ಥಾನದ ಹೆಸರಿಗೆ 19 ಎಕ್ರೆ ಜಾಗ ಆರ್ ಟಿಸಿ ಆಗಿದೆ. ಅಲ್ಲಿ ಗೋಲೋಕ ಉತ್ಸವ ಮಾಡುವ ಕುರಿತು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಶುಭ ಹಾರೈಸಿದರು. ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ಡಾ.ಸುಧಾ ಎಸ್‍. ರಾವ್, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕಾಮಗಾರಿಗೆ ದೇಣಿಗೆ ನೀಡಿದವರನ್ನು, ಇಂಜಿನಿಯರ್ ಗಳನ್ನು  ಗೌರವಿಸಲಾಯಿತು.

ತನ್ವಿ ಈಶ್ವರ ಚಂದ್ರ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ. ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಿಂದ ಭತ್ತ, ಅಕ್ಕಿ ಕಳಸದೊಂದಿಗೆ, ಹೂ, ಬಂಗಾರ, ಬೆಳ್ಳಿ, ಹಣ, ಅರಿಶಿನ ಕುಂಕುಮ/ ಕಲಶಗಳು , ತರಕಾರಿ, ತೆಂಗಿನ ಕಾಯಿ, ಅಡಿಕೆ ಗೊನೆ, ಕಾಫಿ, ಹಣ್ಣುಗಳು/ಧಾನ್ಯಗಳು, ತುಳಸಿ ಗಿಡ, ತುಪ್ಪ, ಹಾಲು, ಮಗು /ಶಿಶು, ಮುತ್ತೈದೆಯರು, ದಂಪತಿಗಳು,  ಸುವಸ್ತುಗಳೊಂದಿಗೆ ಮಂಗಳವಾದ್ಯ, ಪ್ರಾಜ್ವಲ್ಯಮಾನ ದೀಪ, ಕಲಶ ಹಿಡಿದ ಮಹಿಳೆಯರ ಸಹಿತ ಮೆರವಣಿಗೆ ಮೂಲಕ ತೆರಳಿ ಸಭಾಭವನ ಪ್ರವೇಶಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top