ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗು ಸಾವಿಗೀಡಾದ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂಯ ಐವರು ಅಧಿಕಾರಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
ಬೆಸ್ಕಾಂ ಕಚೇರಿಯಿಂದ 100 ಮೀಟರ್ ದೂರದಲ್ಲಿರುವ ವೈಟ್‌ಫೀಲ್ಡ್ ಮುಖ್ಯರಸ್ತೆಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಭಾನುವಾರ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸೌಂದರ್ಯ (23) ಮತ್ತು ಅವರ ಒಂಬತ್ತು ತಿಂಗಳ ಮಗು ಸಜೀವ ದಹನವಾಗಿದ್ದರು.
ಈ ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಲಕ್ಷ್ಯ ತೋರಿದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಆರಂಭದಲ್ಲಿ ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿತ್ತು ಮತ್ತು ನಂತರ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ತಾಯಿ, ಮಗುವಿನ ಸಾವಿಗೆ ಕಾರಣರಾದ ಆರೋಪದ ಮೇಲೆ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಶ್ರೀರಾಮ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಬ್ರಹ್ಮಣ್ಯ, ಸಹಾಯಕ ಎಂಜಿನಿಯರ್ ಚೇತನ್, ಜಂಟಿ ಎಂಜಿನಿಯರ್ ರಾಜಣ್ಣ ಮತ್ತು ಸ್ಟೇಷನ್ ಆಪರೇಟರ್ ಮಂಜುನಾಥ್ ಅವರನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ದುರಂತ ಸಂಭವಿಸಿ ಒಂದು ಗಂಟೆ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ. ಶನಿವಾರ ರಾತ್ರಿ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ ಎಂದು ಆರೋಪಿಸಲಾಗಿದೆ.
ತಮಿಳುನಾಡಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿ ಸೌಂದರ್ಯ ತನ್ನ 9 ತಿಂಗಳ ಮಗಳು ಮತ್ತು ಪತಿ ಸಂತೋಷ್ ಕುಮಾರ್ ಅವರೊಂದಿಗೆ ಬೆಂಗಳೂರಿಗೆ ಮರಳುತ್ತಿದ್ದರು. ಬಸ್ ಇಳಿದು ಮನೆಗೆ ನಡೆದುಕೊಂಡು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಪಾದಚಾರಿ ಮಾರ್ಗದ ಮೇಲೆ ತುಂಡಾಗಿ ಬಿದ್ದಿದ್ದ 11 ಕೆವಿ ವಿದ್ಯುತ್ ತಂತಿಯನ್ನು ತುಳಿದು ಸೌಂದರ್ಯ ಮತ್ತು ಆಕೆಯ ಮಗು ಸಜೀವ ದಹನವಾಗಿದ್ದಾರೆ. ಜೊತೆಯಲ್ಲಿದ್ದ ಸಂತೋಷ್ ಅವರನ್ನು ರಕ್ಷಿಸಲು ಯತ್ನಿಸಿದಾಗ ಅವರಿಗೆ ವಿದ್ಯುತ್ ಶಾಕ್ ತಗುಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಸಂಬಂಧ ಕಾಡುಗೋಡಿ ಪೊಲೀಸರು ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಬೆಸ್ಕಾಂ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದು, ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ.