ಉಡುಪಿ, ದ.ಕ. ಜಿಲ್ಲೆ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪಿಎಂ ವಿಶ್ವಕರ್ಮ ಯೋಜನೆ ವಿಸ್ತರಣೆ

ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ವಿಶ್ವಕರ್ಮ ಯೋಜನೆಯನ್ನು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.

ಮೊದಲ ಹಂತದಲ್ಲಿ 18 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಇದೀಗ ಉಳಿದ 13 ಜಿಲ್ಲೆಗಳನ್ನು ಯೋಜನೆಯೊಳಗೆ ತರಲಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಧಾರವಾಡ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ವಿಜಯನಗರ ಜಿಲ್ಲೆಗಳನ್ನು ಎರಡನೇ ಹಂತದಲ್ಲಿ ಸೇರಿಸಿಕೊಳ್ಳಲಾಗಿದೆ. ಎಲ್ಲಾ ಕುಶಲ ಕರ್ಮಿಗಳಿಗೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿದೆ.



































 
 

ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಸುಮಾರು 18 ವೃತ್ತಿಗಳವರಿಗೆ ಕೌಶಲ ಮತ್ತು ಆರ್ಥಿಕ ಬಲ ನೀಡಿ ಅವರ ಜೀವನ ಮಟ್ಟ ಸುಧಾರಿಸುವ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಯೋಜನೆ ರೂಪಿಸಿ ಅನುಷ್ಠಾನ ಮಾಡಿದೆ. ಇದರಲ್ಲಿ ಬಡಗಿಗಳು, ದೋಣಿ ತಯಾರಕರು, ಕುಲುಮೆ ಕೆಲಸಗಾರರು, ಕಮ್ಮಾರರು, ಬುಟ್ಟಿ – ಚಾಪೆ, ಬಾಸ್ಕೆಟ್ ನೇಯ್ಕೆಗಾರರು, ಅಕ್ಕಸಾಲಿಗರು, ಅಗಸರು, ಶಿಲ್ಪಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು, ಕುಂಬಾರರು, ಚಮ್ಮಾರರು, ದರ್ಜಿಗಳು, ಕೇಶ ವಿನ್ಯಾಸಕರು, ಗಾರೆಗಾರರು, ಮಾಲೆ ತಯಾರಕರು, ಮೀನುಗಾರಿಕೆ ಬಲೆ ತಯಾರಕರನ್ನು ಸೇರಿಸಲಾಗಿದೆ.

ಪ್ರಕ್ರಿಯೆ ಹೇಗೆ?

ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಗ್ರಾಪಂ ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಸಲ್ಲಿಸಿದ ಅರ್ಜಿಯು ಗ್ರಾಪಂ ಅಧ್ಯಕ್ಷರು / ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರ ಲಾಗಿನ್ ಗೆ ಹೋಗುತ್ತದೆ. 18 ವೃತ್ತಿಯಲ್ಲಿ ಯಾವುದಾದರೂ ಒಂದರಲ್ಲಿ ಅವರು ಬರಲಿದೆಯೇ ಎಂಬುದನ್ನು ಖಚಿತಪಡಿಸಬೇಕು. ಅವರ ಕಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ಖಚಿತಪಡಿಬೇಕು ಮತ್ತು ಈ ಕುಟುಂಬದಲ್ಲಿ ಯಾರು ಸರಕಾರಿ ನೌಕರರು ಇಲ್ಲದಿರುವ ಬಗ್ಗೆ ಅಧ್ಯಕ್ಷರು ಪರಿಶೀಲಿಸಿ ಅಂಗೀಕರಿಸಬೇಕು. ಅನಂತರ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಗೆ ಬರಲಿದೆ. ಅಲ್ಲಿ ಪರಿಶೀಲಿಸಿ ಅಂಗೀಕರಿಸಿ ರಾಜ್ಯ ಸಮಿತಿಗೆ ಕಳುಹಿಸಲಾಗುತ್ತದೆ. ರಾಜ್ಯ ಮಟ್ಟದ ಸಮಿತಿ ಅಂತಿಮಗೊಳಿಸಲಿದೆ.

ಮಾಹಿತಿಗಾಗಿ:

ಪಿಎಂ ವಿಶ್ವಕರ್ಮ ಯೋಜನೆಗೆ ಉಡುಪಿ, ದ.ಕ. ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ. ಇಲ್ಲಿ ಸ್ಥಳೀಯಾಡಳಿತದ ಅಧ್ಯಕ್ಷರ ಪಾತ್ರವು ಬಹುಮುಖ್ಯವಾಗಿರುತ್ತದೆ. ಮಾಹಿತಿಗೆ ದ.ಕ. ಜಿಲ್ಲಾ ಕೈಗಾರಿಕೆ ಕೇಂದ್ರದ ದೂರವಾಣಿ ಸಂಖ್ಯೆ 0824-2225071 ಹಾಗೂ ಉಡುಪಿ ಜಿಲ್ಲಾ ಕೈಗಾರಿಕೆ ಕೇಂದ್ರದ ದೂರವಾಣಿ ಸಂಖ್ಯೆ 0820-2575650 ಸಂಪರ್ಕಿಸಬಹುದು ಎಂದು ಉಭಯ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್ ಹಾಗೂ ನಾಗರಾಜ ವಿ. ನಾಯಕ್ ತಿಳಿಸಿದ್ದಾರೆ.

ಯೋಜನೆಯ ಉಪಯೋಗ:

ನಿರ್ದಿಷ್ಟ ವೃತ್ತಿ ಮಾಡುತ್ತಿರುವವರಿಗೆ ಪ್ರಾರಂಭಿಕವಾಗಿ ಒಂದು ವಾರದ (40 ಗಂಟೆ) ಪ್ರಾಥಮಿಕ ಕೌಶಲ ತರಬೇತಿ ನೀಡಲಾಗುತ್ತದೆ. ಆಸಕ್ತರಿಗೆ ಎರಡು ವಾರಗಳ ತರಬೇತಿ ಪಡೆಯಲು ಅವಕಾಶವಿದೆ. ತರಬೇತಿ ಅವಧಿಯಲ್ಲಿ ದಿನಕ್ಕೆ 500 ರೂ.ಗಳಂತೆ ಭತ್ತೆ, ಅನಂತರ ವೃತ್ತಿಗೆ ಸಂಬಂಧಿಸಿದ ಸುಧಾರಿತ ಸಾಮಗ್ರಿ ಖರೀದಿಗೆ 15,000 ರೂ.ಗಳ ಅನುದಾನ ನೀಡಲಾಗುತ್ತದೆ. ತರಬೇತಿ ಮುಗಿಸಿದ ಬಳಿಕ ಸರಕಾರವು ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಹಾಗೂ ಅದನ್ನು ಮರುಪಾವತಿಸಿದ ಬಳಿಕ ಎರಡನೇ ಹಂತದಲ್ಲಿ 2 ಲಕ್ಷ ರೂ. ಸಾಲವನ್ನು ಶೇ. 5ರ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಗಳ ಮೂಲಕ ಒದಗಿಸಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top