ಪುತ್ತೂರು: ಮಂಗಳೂರು ಹಿದಾಯ ಫೌಂಡೇಶನ್, ದೇರಳಕಟ್ಟೆ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಎನ್‍ಆರ್‍ಐ ಪ್ರವಾಸಿಗಳು ಹಾಗೂ ಕಲ್ಲೇಗ ಜುಮ್ಮಾ ಮಸೀದಿ ಸಂಯುಕ್ತ ಆಶ್ರಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ನ.19 ರಂದು ಕಲ್ಲೇಗ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕಲ್ಲೇಗ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಬಿ.ಎ.ಶಕೂರ್ ಹಾಜಿ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಬಿರದಲ್ಲಿ ಸಾಮಾನ್ಯ ಪರೀಕ್ಷೆ, ಕಣ್ಣು, ಕಿವಿ, ಮೂಗು, ಗಂಟಲು, ಹಲ್ಲು, ಎಲುಬು, ಹೆರಿಗೆ ಮತ್ತು ಪ್ರಸೂತಿ ಹಾಗೂ ಮಕ್ಕಳ ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಪರೀಕ್ಷೆಯನ್ನು ನಡೆಸಲಾಗುವುದು. ಮಹಿಳೆಯರಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಕ್ಲಿನಿಕ್ ಬಸ್ ನಲ್ಲಿ ತಪಾಸಣೆ ವ್ಯವಸ್ಥೆ ಇದೆ. ಅಲ್ಲದೆ ಉಚಿತ ಔಷಧಿ ವಿತರಣೆ, ಕನ್ನಡ ನೀಡಲಾಗುವುದು ಎಂದು ಅವರು ತಿಳಿಸಿದರು.
ಶಿಬಿರವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್, ಯೇನಪೋಯ ಡೆಂಟಲ್ ಕಾಲೇಜಿನ ಡಾ.ಇಮ್ರಾನ್ ಪಾಷಾ ಪಾಲ್ಗೊಳ್ಳಲಿದ್ದಾರೆ. ಕಲ್ಲೇಗ ಜುಮ್ಮಾ ಮಸೀದಿಯ ಮುದರಿಸ್ ಶಾಫಿ ಫೈಝಿ ಇರ್ಫಾನಿ ದುಃವಾ ನೆರವೇರಿಸುವರು. ಹಿದಾಯ ಫೌಂಡೇಶನ್ ನ ಅಧ್ಯಕ್ಷ ಜಿ.ಮೊಹಮ್ಮದ್ ಹನೀಫ್ ಹಾಜಿ ಅಧ್ಯಕ್ಷತೆ ವಹಿಸುವರು. ಕಲ್ಲೇಗ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಪಿ.ಮೊಹಮ್ಮದ್ ಹಾಜಿ ಉಪಸ್ಥಿತರಿರುವರು. ಸಾರ್ವಜನಿಕರು ಶಿಬಿರ ಸದುಪಯೋಗ ಪಡೆಯುವಂತೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಲೈಮಾನ್, ರಶೀದ್, ಹನೀಫ್ ಹಾಜಿ, ಅಶ್ರಫ್ ಕಲ್ಲೇಗ ಉಪಸ್ಥಿತರಿದ್ದರು.