ಪ್ರಕರಣಗಳೇ ಇಲ್ಲದ ಕಾರ್ಯಕರ್ತರ ಗಡಿಪಾರು! | ವಿಶ್ವಹಿಂದು ಪರಿಷತ್, ಬಜರಂಗದಳ ಖಂಡನೆ

ಪುತ್ತೂರು: ಅಪ್ರಾಪ್ತ ಬಾಲಕಿಯನ್ನು ಅನ್ಯಮತೀಯನಿಂದ ರಕ್ಷಣೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಯುವಕರನ್ನು ಪೊಲೀಸ್ ಇಲಾಖೆ ಗಡಿಪಾರಿಗೆ ಶಿಪಾರಸ್ಸು ಮಾಡಿ ಆದೇಶಿಸಿರುವುದನ್ನು ವಿಶ್ವಹಿಂದು ಪರಿಷತ್, ಬಜರಂಗದಳ ಕಟುವಾಗಿ ಖಂಡಿಸುತ್ತದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಲ್ವರ ವಿರುದ್ದ ನಗರ ಠಾಣೆಯಲ್ಲಿ ಯಾವುದೇ ಪ್ರಕರಣಗಳಿಲ್ಲ. ಬಾಲಕಿಯನ್ನು ರಕ್ಷಿಸಿ ಪೊಷಕರ ಗಮನಕ್ಕೆ ತಂದಿರುವ ಒಂದೇ ಕಾರಣಕ್ಕೆ ಗಡಿಪಾರಿಗೆ ನೊಟೀಸ್ ನೀಡಲಾಗಿದೆ. ಅವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಮಾಡಿರುವುದೇ ಆಗಿದ್ದಲ್ಲಿ ಅದನ್ನು ಸ್ಪಷ್ಟಪಡಿಸಲಿ. ಸುಳ್ಳು ಕೇಸು ಹಾಕಿ ಸರಕಾರವೇ ಅಶಾಂತಿ ಸೃಷ್ಠಿಸುತ್ತಿದೆ ಎಂದು ಅವರು ಆರೋಪಿಸಿದರು.

ಕಳೆದ ಐದು ತಿಂಗಳ ಹಿಂದೆ ಚುನಾವಣಾ ಸಮಯದಲ್ಲಿ ಅಪ್ರಾಪ್ತ ಯುವತಿಯನ್ನು ಯುವಕನೋರ್ವ ಪುಸಲಾಯಿಸಿ ಸಿನೇಮಾಕ್ಕೆ ಕರೆದುಕೊಂಡು ನಂತರ ಹೊಟೇಲಿನಲ್ಲಿ ಜ್ಯೂಸ್ ಕುಡಿಸುತ್ತಿದ್ದ. ಈ ಸಂದರ್ಭ ನಮ್ಮ ಕಾರ್ಯಕರ್ತರು ಇದನ್ನು ಗಮನಿಸಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಆ ಘಟನೆಗೆ ಸಂಬಂಧಿಸಿದಂತೆ ಕಬಕದ ಮುಸ್ಲಿಂ ಯುವಕನ ಮೇಲೆ ಪೋಕ್ಸೋ ಕೇಸು ದಾಖಲಾಗಿದೆ. ಇದೇ ಘಟನೆಗೆ ಸಂಬಂಧಿಸಿ ಆತನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ನಾಲ್ವರ ಮೇಲೆ ಕೇಸು ದಾಖಲಾಗಿದೆ. ಈ ಪ್ರಕರಣದಲ್ಲಿದ್ದ ರಿಕ್ಷಾ ಚಾಲಕ ದಿನೇಶ್ ತಿಂಗಳಾಡಿ, ಎಲೆಕ್ಟ್ರಿಷಿಯನ್ ಪ್ರಜ್ವಲ್ ಸಂಪ್ಯ, ಕೂಲಿ ಕಾರ್ಮಿಕರಾದ ನಿಶಾಂತ್ ತಿಂಗಳಾಡಿ ಹಾಗೂ ಪ್ರದೀಪ್ ಅಜಲಡ್ಕ ಅವರನ್ನು ಪೊಲೀಸ್ ಇಲಾಖೆ ಬಾಗಲಕೋಟೆಗೆ ಗಡಿಪಾರಿಗೆ ಶಿಪಾರಸ್ಸು ಮಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ. ಆ ನಾಲ್ವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಸೃಷ್ಠಿಸುವಲ್ಲಿ ಭಾಗಿಗಳಾಗಿಲ್ಲ. ಆದರೂ ಪೊಲೀಸ್ ಇಲಾಖೆ ನೀಡಿರುವ ನೊಟೀಸಿನಲ್ಲಿ ನಾಲ್ವರು ಕೋಮುವಾದಿ, ರೌಡಿಸಂ, ಅಶಾಂತಿ ಸೃಷ್ಟಿಸುವಲ್ಲಿ ಭಾಗಿಗಳಾಗಿದ್ದಾರೆ ಎಂದು ಉಲ್ಲೇಖಿಸಿ ಸಹಾಯಕ ಆಯುಕ್ತರ ಮೂಲಕ ಗಡಿಪಾರಿಗೆ ನೊಟೀಸ್ ನೀಡಲಾಗಿದೆ. ಪೊಲೀಸ್ ಇಲಾಖೆಯ ಈ ನಡೆ ಹಲವು ಪ್ರಶ್ನೆಗಳು ಹುಟ್ಟು ಹಾಕುತ್ತವೆ. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿರುವ ನಾಲ್ವರು ಯುವಕರನ್ನು ನಗರ ಠಾಣೆಯವರು ಗಡಿಪಾರಿಗೆ ಶಿಪಾರಸ್ಸು ಮಾಡಿರುವುದರಿಂದ ಪೊಲೀಸ್ ಇಲಾಖೆಯ ಮೇಲೆ ಸಂಶಯದಿಂದ ನೋಡುವಂತೆ ಮಾಡಿದೆ ಎಂದು ಅವರು ತಿಳಿಸಿದರು.































 
 

ರೌಡಿಸಂ, ಕೋಮುವಾದ ಕೃತ್ಯಗಳಲ್ಲಿ ಭಾಗಿಯಾದವರನ್ನು ಗಡಿಪಾರು ಮಾಡುವ ಕ್ರಮಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ ಸರಕಾರ, ಜನಪ್ರತಿನಿಧಿಗಳ ಒತ್ತಡಕ್ಕೋಸ್ಕರ ಯಾರದ್ದೋ ಮೇಲೆ ವೃಥಾ ಅಪವಾದ ಹೊರಿಸಿ, ಗಡಿಪಾರಿಗೆ ಆದೇಶ ಮಾಡಲು ಹೊರಟಿರುವ ಕ್ರಮ ಸರಿಯಲ್ಲ. ಸರಕಾರ ಹಿಂದು ವಿರೋಧಿಯಾಗಿ ಯೋಚನೆ ಮಾಡಿದರೆ ಅದಕ್ಕೆ ಖಂಡಿತವಾಗಿ ಇಡೀ ಸಮಾಜ, ಜನತೆ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು. ಇಲಾಖೆ ಸಾಮಾನ್ಯ ವ್ಯಕ್ತಿಗಳ ಮೇಲೆ ಕೇಸು ಹಾಕಿ ಗಡಿಪಾರು ಮಾಡುವ ಕೆಲಸ ಮಾಡಿದರೆ ನಾವು ಹೋರಾಟ ಮಾಡಲು ಸಿದ್ದ. ಇದರ ಕುರಿತು ಇಲಾಖೆಯ ಮೇಲಾಧಿಕಾರಿಗಳು, ಗೃಹ ಸಚಿವರು ಪರಮೇಶ್ವರ್ ಅವರು ಯೋಚಿಸಿ ಸ್ಪಷ್ಟ ಸೂಚನೆ ನೀಡಬೇಕು. ಸಂಘಟನೆ ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರೆ ಅದನ್ನು ಸ್ಪಷ್ಟಪಡಿಸಿ. ಅದನ್ನೂ ಎದುರಿಸಲು ನಾವು ಸಿದ್ದ. ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಮೇಲಾಧಿಕಾರಿ ಇದರ ಬಗ್ಗೆ ಗಮನಿಸಿ ಮುಂದೆ ಇಂತಹ ತಪ್ಪು ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಗಡಿಪಾರು ಮಾಡಿರುವ ವಿಚಾರಕ್ಕೆ ಸಂಬಂಧಿಸಿ ನ. 22ರಂದು ವಿಚಾರಣೆಗೆ ಹಾಜರಾಗುವಂತೆ ಸಹಾಯಕ ಆಯುಕ್ತರಿಂದ ನೋಟೀಸ್ ಬಂದಿದೆ. ಈ ಘಟನೆಯ ಮೇಲೆ ವಕೀಲರ ಮೂಲಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗುವುದು. ಆಯಾ ಠಾಣಾ ವ್ಯಾಪ್ತಿಯವರು ಗಡಿಪಾರು ಮಾಡಬೇಕು. ಆದರೆ ಈಗಾಗಲೇ ಗಡಿಪಾರಿಗೆ ಶಿಪಾರಸ್ಸು ಮಾಡಲಾದ ನಾಲ್ವರು ನಗರ ಠಾಣಾ ವ್ಯಾಪ್ತಿಯವರಲ್ಲ. ಅವರ ಮೇಲೆ ಯಾವುದೇ ಕೇಸುಗಳಿಲ್ಲ. ಅಪ್ರಾಪ್ತ ಬಾಲಕಿಗೆ ರಕ್ಷಣೆ ನೀಡಿದ ಮಾತ್ರಕ್ಕೆ ಗಡಿಪಾರಿಗೆ ನೊಟೀಸ್ ನೀಡಲಾಗಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ, ಗ್ರಾಮಾಂತರ ಪ್ರಖಂಡ ಸಂಚಾಲಕ ವಿಶಾಖ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top