ಪುತ್ತೂರು: ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲು ಮಾನದಂಡವೇನು, ಕೇವಲ ಒಂದು ಕೇಸು ಇದ್ದವರಿಗೂ ಗಡಿಪಾರು ನೋಟೀಸ್ ನೀಡಲಾಗಿದೆ. ನನ್ನನ್ನು ಗಡಿಪಾರು ಮಾಡಿ, ಕಾರ್ಯಕರ್ತರನ್ನು ಯಾಕೆ ಗಡಿಪಾರು ಮಾಡ್ತೀರಾ. ಹೀಗೆಂದು ಹೇಳಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲ್.
ಬಜರಂಗದಳ ಐದು ಮಂದಿ ಕಾರ್ಯಕರ್ತರ ಗಡಿಪಾರಿಗೆ ಆದೇಶ ಬಂದ ಹಿನ್ನಲೆಯಲ್ಲಿ ಬಜರಂಗಳದ ಕಾರ್ಯಕರ್ತರು ಸಂಸದರನ್ನು ಭೇಟಿ ಮಾಡಿದ್ದು, ಕಾರ್ಯಕರ್ತರ ಸಮ್ಮುಖದಲ್ಲೇ ಅಧಿಕಾರಿಗಳ ಜತೆ ಫೋನ್ ಮುಖಾಂತರ ಈ ಕುರಿತು ಮಾತನಾಡಿದರು.
ಆದೇಶ ಮಾಡುವ ಮೊದಲು ಸರಿಯಾಗಿ ಪರಿಶೀಲನೆ ನಡೆಸಬೇಕು. ಅದನ್ನು ಬಿಟ್ಟು ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿಯ ಕ್ರಮ ಕೈಗೊಳ್ಳಬೇಡಿ ಎಂದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಪ್ರಸ್ತುತ ರಾಜ್ಯದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಸುಳ್ಳು ಪ್ರಕರಣ ದಾಖಲು ಮಾಡುವುದು, ಅಪರಾಧಿ ಅಲ್ಲದವರಿಗೆ ಗಡಿಪಾರು ಆದೇಶ ಮಾಡುವಂತದ್ದನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ, ಗಡಿಪಾರು ಆದೇಶ ಮಾಡುವುದು ಕಂಡು ಬಂದಿದೆ. ಇದನ್ನು ನಾವು ಖಂಡಿಸುತ್ತೇವೆ. ಈ ರೀತಿಯ ದ್ವೇಷದ ರಾಜಕಾರಣ ಸರಿಯಲ್ಲ. ಅಧಿಕಾರಿಗಳ ಜೊತೆಗೂ ಈ ಬಗ್ಗೆ ಮಾತನಾಡಿದ್ದೇನೆ. ಯಾವುದೇ ರೀತಿಯ ಒಂದೇ ಒಂದು ಕೇಸ್ ಇಲ್ಲದವನಿಗೂ ಗಡಿಪಾರು ನೋಟೀಸ್ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಈ ರೀತಿಯ ಕೇಸ್ ಹಾಕುವುದಕ್ಕೆ ನಾವು ಬಿಡುವುದಿಲ್ಲ ಎಂದರು.
ಸಿದ್ದರಾಮಯ್ಯನವರ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ಕುಂಠಿತವಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.